ರಾಜ್ಯ

ಕರ್ನಾಟಕ ಬಜೆಟ್ 2024: ಮೀನುಗಾರರ ರಕ್ಷಣೆಗೆ 'ಸಮುದ್ರ ಆಂಬ್ಯುಲೆನ್ಸ್' ಘೋಷಿಸಿದ ಸಿಎಂ ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದು, ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಾಗ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ಕರೆತರಲು 'ಸಮುದ್ರ ಆಂಬ್ಯುಲೆನ್ಸ್' ಘೋಷಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ದಾಖಲೆಯ 15ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂಪಾಯಿ ಯೋಜನೆ ಘೋಷಿಸಿದ್ದಾರೆ.

ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣೆ ಮಾಡುವುದಕ್ಕಾಗಿ 7 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸಮುದ್ರ ಆಂಬ್ಯುಲೆನ್ಸ್ ಖರೀದಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಹೈಟೆಕ್​ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ವಿವಿಧ ವಸತಿ ಯೋಜನೆಗಳಡಿ 10 ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

SCROLL FOR NEXT