ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ಮುಂದಿನ ಎರಡ್ಮೂರು ವರ್ಷಗಳಲ್ಲಿ ಹೊಸ ತಾಲ್ಲೂಕುಗಳಲ್ಲಿ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅನುಮತಿ: ಕೃಷ್ಣ ಬೈರೇಗೌಡ

Ramyashree GN

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ರಚಿಸಲಾದ ಎಲ್ಲಾ 49 ತಾಲ್ಲೂಕುಗಳಲ್ಲಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಘೋಷಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೈಲಹೊಂಗಲ ಶಾಸಕ ಕೌಜಲಗಿ ಮಹಾಂತೇಶ ಶಿವಾನಂದ್ ಅವರು ತಾಲ್ಲೂಕಿನ ಆಡಳಿತ ಕಟ್ಟಡಗಳ ದುರಸ್ತಿ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

'2018ರಲ್ಲಿ 63 ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರ 14 ತಾಲ್ಲೂಕುಗಳಲ್ಲಿ ಮಾತ್ರ ಆಡಳಿತ ಭವನ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಉಳಿದ 49 ತಾಲ್ಲೂಕುಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ಈ ಎಲ್ಲ ತಾಲ್ಲೂಕುಗಳಿಗೂ ನೂತನ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಹೊಸ ತಾಲ್ಲೂಕುಗಳ ಜತೆಗೆ ಹೆಚ್ಚುವರಿಯಾಗಿ 80 ರಿಂದ 100 ತಾಲ್ಲೂಕುಗಳ ಆಡಳಿತ ಕಚೇರಿಗಳ ಕಟ್ಟಡ ದುರಸ್ತಿ ಅಗತ್ಯವಿದ್ದು, ಹೊಸ ಆಡಳಿತ ಕಚೇರಿಗಳ ನಿರ್ಮಾಣಕ್ಕೆ ಆಗ್ರಹ ಕೇಳಿಬಂದಿದೆ. ಹೀಗಾಗಿ, ಅನುದಾನದ ಲಭ್ಯತೆಯನ್ನು ಗಣನೆಗೆ ತೆಗೆದುಕೊಂಡು ಆಡಳಿತಾತ್ಮಕ ಕಟ್ಟಡ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುಮತಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ತಿಳಿಸಿದರು.

SCROLL FOR NEXT