ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ನೈರುತ್ಯ ರೈಲ್ವೆಯ 15 ರೈಲು ನಿಲ್ದಾಣಗಳು ಮೇಲ್ದರ್ಜೆಗೆ: ಕಾಮಗಾರಿಗಳಿಗೆ ಫೆ.26ಕ್ಕೆ ಪ್ರಧಾನಿ ಮೋದಿ ಚಾಲನೆ

Manjula VN

ಬೆಂಗಳೂರು: ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 372.13 ಕೋಟಿ ರೂಪಾಯಿ ವೆಚ್ಚದಲ್ಲಿ 15 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಶುಕ್ರವಾರ ಮಾಹಿತಿ ನೀಡಿದೆ.

ಕಾಮಗಾರಿಗಳಿಗೆ ಫೆಬ್ರವರಿ 26 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ ಎಂದು ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಯೋಗೇಶ್ ಮೋಹನ್ ತಿಳಿಸಿದ್ದಾರೆ.

ನೈರುತ್ಯ ರೈಲ್ವೆ ವ್ಯಾಪ್ತಿಯ ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕೆಂಗೇರಿ, ಕೃಷ್ಣರಾಜಪುರ, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್ ಫೀಲ್ಡ್ ರೈಲು ನಿಲ್ದಾಣಗಳು ಒಟ್ಟು ರೂ.372.13 ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ.

ರೈಲ್ವೆ ನಿಲ್ದಾಣಕ್ಕೆ ಉತ್ತಮ ಪ್ರವೇಶದ್ವಾರ, ಕಾಯುವ ಸ್ಥಳ, ಲಿಫ್ಟ್‌, ಎಸ್ಕಲೇಟರ್‌, ಸ್ವಚ್ಛತೆ, ಉಚಿತ ವೈಫೈ ವ್ಯವಸ್ಥೆ, ‘ಒಂದು ನಿಲ್ದಾಣ ಒಂದು ಉತ್ಪನ್ನ’ ವ್ಯವಸ್ಥೆ, ಮಾಹಿತಿ ವ್ಯವಸ್ಥೆ ಸಹಿತ ಅನೇಕ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದರು.

ಇದಲ್ಲದೇ ಹೆಚ್ಚುವರಿಯಾಗಿ ಚನ್ನಪಟ್ಟಣ–ಶೆಟ್ಟಿಹಳ್ಳಿ ಲೆವೆಲ್‌ ಕ್ರಾಸಿಂಗ್ ಬದಲಾಗಿ ಆರ್‌ಯುಬಿ (ರೈಲ್ವೆ ಅಂಡರ್‌ ಬ್ರಿಡ್ಜ್‌), ಮಕ್ಕಾಜಿಪಲ್ಲಿ–ನಾಗಸಮುದ್ರಂ ನಡುವಿನ ಲೆವೆಲ್‌ ಕ್ರಾಸಿಂಗ್‌ ಬದಲು ಆರ್‌ಯುಬಿ, ಕುಂಬಾರಿಕೆ ಪಟ್ಟಣದಲ್ಲಿ ಆರ್‌ಒಬಿ (ರೈಲ್ವೆ ಓವರ್‌ ಬ್ರಿಜ್‌) ಮುಂತಾದ ಕಾಮಗಾರಿಗಳಿಗೂ ‍ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಫೆಬ್ರವರಿ 26 ರಂದು 554 ರೈಲ್ವೇ ನಿಲ್ದಾಣಗಳು ಮತ್ತು 1,585 ರಸ್ತೆ ಮೇಲ್ಸೇತುವೆಗಳು/ಅಂಡರ್‌ಪಾಸ್‌ಗಳ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆಂದು ಮಾಹಿತಿ ನೀಡಿದರು.

SCROLL FOR NEXT