ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಉತ್ತರ ಕನ್ನಡ: ಮಂಗನ ಕಾಯಿಲೆಗೆ ಮತ್ತೋರ್ವ ಮಹಿಳೆ ಸಾವು; ರಾಜ್ಯದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

Ramyashree GN

ಉತ್ತರ ಕನ್ನಡ: ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್‌ಡಿ) ಉತ್ತರ ಕನ್ನಡ ಜಿಲ್ಲೆಯ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಈ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಮೃತರನ್ನು ಸಿದ್ದಾಪುರ ತಾಲ್ಲೂಕಿನ ಕೂರ್ಲಕೈ ಗ್ರಾಮದ 60 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಮೂರು ದಿನಗಳಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರಿಗೆ 20 ದಿನಗಳ ಹಿಂದೆ ಮಂಗನ ಜ್ವರ ಕಾಣಿಸಿಕೊಂಡಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದರು. ಸಿದ್ದಾಪುರ ತಾಲ್ಲೂಕಿನಲ್ಲಿಯೇ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

103 ಸಕ್ರಿಯ ಮಂಗನ ಕಾಯಿಲೆ ಪ್ರಕರಣಗಳನ್ನು ಹೊಂದಿರುವ ರಾಜ್ಯದಲ್ಲಿ ಇದುವರೆಗೆ ಮೂವರು ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಬ್ಬರು ರೋಗದಿಂದ ಮೃತಪಟ್ಟಿದ್ದಾರೆ.

ಮಂಗನ ಕಾಯಿಲೆ ರೋಗ ಲಕ್ಷಣಗಳು

ಮಂಗನ ಕಾಯಿಲೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಾಗಿ, ಕೆಎಫ್‌ಡಿ ವೈರಸ್‌ ಸೋಂಕಿತ ಉಣ್ಣೆ ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಬರುತ್ತದೆ. ಸೋಂಕಿತ ವ್ಯಕ್ತಿಗೆ ಎರಡು ಹಂತಗಳಲ್ಲಿ ರೋಗ ಕಾಡುತ್ತದೆ. ಮೊದಲ ಹಂತದಲ್ಲಿ ಜ್ವರ, ಚಳಿ, ತಲೆನೋವು, ಕೀಲುನೋವು, ವಾಂತಿ, ಹೊಟ್ಟೆ ನೋವು, ಸ್ನಾಯು ಸೆಳೆತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಎರಡನೇ ಹಂತದಲ್ಲಿ ಬಿಳಿರಕ್ತ ಕಣಗಳು ಕಡಿಮೆಯಾಗಿ ತೀವ್ರ ರಕ್ತಸ್ರಾವವಾಗುತ್ತದೆ. ಈ ಹಂತದಲ್ಲಿ ಕಾಯಿಲೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯ ಸೇರಿದಂತೆ ಅಂಗಾಗಗಳು ವೈಫಲ್ಯವಾಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತದೆ.

SCROLL FOR NEXT