ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ 
ರಾಜ್ಯ

90 ದಿನಗಳ ಹೆರಿಗೆ ಭತ್ಯೆ ತಡೆ ಹಿಡಿದಿದ್ದ ಕೆಪಿಟಿಸಿಎಲ್ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ

Manjula VN

ಬೆಂಗಳೂರು: ಕಾನೂನುಬಾಹಿರವಾಗಿ ಮಹಿಳೆಯೊಬ್ಬರ 90 ದಿನಗಳ ಹೆರಿಗೆ ಭತ್ಯೆ ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಾನು ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರೂ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಕ್ರಮವನ್ನು ಪ್ರಶ್ನಿಸಿ 71 ವರ್ಷದ ನಿವೃತ್ತ ನೌಕರರಾಗಿರುವ ಎ.ಆಲಿಸ್ ಎಂಬುವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ, ಕೆಪಿಟಿಸಿಎಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 2013ರ ಮೇ 1ರಿಂದ ಅನ್ವಯವಾಗುವಂತೆ 90 ದಿನಗಳ ಭತ್ಯೆಯನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡುವಂತೆ ಸೂಚಿಸಿದೆ.

ಜೊತೆಗೆ, ಅರ್ಜಿದಾರರು ಬೆಸ್ಕಾಂನ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗೆ ಹೊಸದಾಗಿ ಮನವಿ ಸಲ್ಲಿಸಿ, 90 ದಿನಗಳ ಭತ್ಯೆಯನ್ನು ಪಾವತಿಸುವಂತೆ ಕೋರಬಹುದು. ಅರ್ಜಿದಾರರ ಮನವಿಯನ್ನು ಸಲ್ಲಿಸಿದರೆ, ಸಂಬಂಧಪಟ್ಟ ಪ್ರಾಧಿಕಾರವು ಆದೇಶವನ್ನು ಪರಿಶೀಲಿಸಿ, ಭತ್ಯೆಯನ್ನು ಶೇ.8ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದೆ.

ಸರ್ಕಾರಿ ನೌಕರರಾಗಿರುವವರಿಗೆ ಪತಿಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವನ್ನು ಪರಿಚಯಿಸುವ ಹಿಂದಿನ ಉದ್ದೇಶವು ಮಕ್ಕಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡುವುದಾಗಿತ್ತು. ಆದರೆ, ರಜೆ ಮಂಜೂರಾದ 30 ವರ್ಷಗಳ ಬಳಿಕ ಪತಿಯು ಶಸ್ತ್ರ ಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಕಾರಣ ನೀಡಿ, ನಿಯಮಗಳ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ, ಕಾನೂನುಬಾಹಿರವಾಗಿ ರಜೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೀಠ ತಿಳಿಸಿದೆ.

ಅಲ್ಲದೆ, ಪ್ರಾರಂಭದಲ್ಲಿ ಹೆರಿಗೆ ರಜೆ ಮಂಜೂರು ಮಾಡುವುದಕ್ಕೆ ಪತ್ನಿ ಸಂತಾನಹರಣ ಮಾಡಿಕೊಳ್ಳಬೇಕು ಎಂಬ ನಿಯಮವಿತ್ತು. ಬಳಿಕ ಪತಿಯೂ ಸಂತಾನಹರಣಕ್ಕೆ ಒಳಗಾಗಬೇಕು ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಏನಿದು ಪ್ರಕರಣ?

ಅರ್ಜಿದಾರರು ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರಿನ ಕರ್ನಾಟಕ ವಿದ್ಯುತ್ ಮಂಡಳಿ ಪ್ರಸರಣ ನಿಗಮದಲ್ಲಿ ಹಿರಿಯ ಸಹಾಯಕಿಯಾಗಿ ನಿವೃತ್ತರಾಗಿದ್ದರು. ಕರ್ನಾಟಕ ಸಿವಿಲ್ ಕಾಯ್ದೆ 1983ರ ನಿಯಮ 130ರ ಅಡಿಯಲ್ಲಿ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು.

ಈ ರಜೆ ದಿನಗಳಿಗೆ ವೇತನ ಪಾವತಿ ಮಾಡಬೇಕಾದಲ್ಲಿ ಮೂರಕ್ಕಿಂತ ಹೆಚ್ಚಿನ ಮಕ್ಕಳಿರುವವರು ಕಡ್ಡಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂಬುದಾಗಿತ್ತು. ಬಳಿಕ ಸರ್ಕಾರಿ ಮಹಿಳಾ ಉದ್ಯೋಗಿಯ ಪತಿಯೂ ಪರ್ಯಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು.

ಅರ್ಜಿದಾರರು ನಿವೃತ್ತರಾದ ಬಳಿಕ ರಜೆ ಪಡೆದುಕೊಂಡಿದ್ದಕ್ಕೆ ಪರಿಹಾರವಾಗಿ ರಜೆಯ ನಗದೀಕರಣ ಸೇರಿದಂತೆ ನಿವೃತ್ತಿಯ ಸೌಲಭ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ನಿಗಮವು, ನಿಯಮ 130ನ್ನು ಉಲ್ಲೇಖಿಸಿ ಅದರಂತೆ ರಜೆ ದಿನಗಳ ವೇತನ ನಗದೀಕರಣ ಮಾಡಿಕೊಳ್ಳಬೇಕಾದರೆ, ಅರ್ಜಿದಾರರ ಪತಿಯೂ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂಬ ತಾಂತ್ರಿಕ ಕಾರಣ ನೀಡಿ, ರಜೆ ಪಡೆದಿದ್ದ ದಿನಗಳ ವೇತನ ನಗದೀಕರಣ ಮಾಡಿಕೊಡುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

SCROLL FOR NEXT