ಕೆ. ಶಿವರಾಮ್
ಕೆ. ಶಿವರಾಮ್ 
ರಾಜ್ಯ

ಮಾಜಿ ಐಎಎಸ್ ಅಧಿಕಾರಿ, ನಟ ಕೆ. ಶಿವರಾಮ್ ನಿಧನ; ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

Nagaraja AB

ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ ಹಾಗೂ ಖ್ಯಾತ ಚಿತ್ರ ನಟ, ರಾಜಕಾರಣಿಯೂ ಆಗಿದ್ದ ಕೆ. ಶಿವರಾಮ್ ನಗರದ ಆಸ್ಪತ್ರೆಯೊಂದರಲ್ಲಿ ಗುರುವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು..

ಅನಾರೋಗ್ಯದ ಕಾರಣದಿಂದ ಕಳೆದ 25 ದಿನಗಳಿಂದ ಎಚ್ ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ. ಶಿವರಾಮು ಇಂದು ಸಂಜೆ 4-15ರ ಸುಮಾರಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಅವರ ಅಳಿಯ, ನಟ ಪ್ರದೀಪ್ ತಿಳಿಸಿದರು. ಅಂತ್ಯಕ್ರಿಯೆ ಸ್ಥಳ ಇನ್ನೂ ನಿರ್ಧಾರ ಮಾಡಿಲ್ಲ. ನಾಳೆ ಬೆಳಗ್ಗೆ 7 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮೃತರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಏಪ್ರಿಲ್ 6, 1953ರಲ್ಲಿ ನಾಟಕ ಮಾಸ್ಟರ್ ಕೆಂಪಯ್ಯ ಹಾಗೂ ಚಿಕ್ಕಬೋರಮ್ಮ ದಂಪತಿಯ ಮಗನಾಗಿ ರಾಮನಗರ ಜಿಲ್ಲೆ ಉರುಗಹಳ್ಳಿಯಲ್ಲಿ ಜನಿಸಿದ ಕೆ. ಶಿವರಾಮ್ ಅಧಿಕಾರಿಯಾಗಿ ಹಾಗೂ ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದರು. ಆದರೆ, ರಾಜಕೀಯದಲ್ಲಿ ಅದೇ ರೀತಿಯ ಯಶಸ್ಸು ಸಿಕ್ಕಿರಲಿಲ್ಲ.

ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲ ವ್ಯಕ್ತಿಯಾಗಿ ಅವರು ಹೆಸರುವಾಸಿಯಾಗಿದ್ದರು. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪಾಸ್ ಮಾಡಿದ ನಂತರ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಮುಗಿಸಿ 1972ರಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಶಿವರಾಮ್, ಮಾರನೇ ವರ್ಷ ಪೊಲೀಸ್ ಇಲಾಖೆ ಗುಪ್ತಚರ ವಿಭಾಗದಲ್ಲಿ ಪೊಲೀಸ್ ಮಾಹಿತಿದಾರರಾಗಿ ಕೆಲಸ ನಿರ್ವಹಿಸಿದ್ದರು. ಕೆಲಸ ಮಾಡುತ್ತಲೇ ಸಂಜೆ ಹಾಗೂ ದೂರ ಶಿಕ್ಷಣ ಮೂಲಕ ಬಿಎ ಮತ್ತು ಎಂಎ ಡಿಗ್ರಿ ಪಡೆದು 1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಡಿಎಸ್ ಪಿ ಆಗಿದ್ದರು. 1986ರಲ್ಲಿ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಪೂರ್ಣಗೊಳಿಸಿದ ಮೊದಲ ವ್ಯಕ್ತಿಯಾಗಿ ಇತಿಹಾಸ ಸೃಷ್ಟಿಸಿದರು.

1993ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮ್ಯೂಸಿಕಲ್ ಮತ್ತು ರೋಮ್ಯಾಂಟಿಕ್ ಚಿತ್ರ 'ಬಾ ನಲ್ಲೆ ಮಧುಚಂದ್ರಿಕೆ' ಮೂಲಕ ಯಶಸ್ವಿ ನಾಯಕ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಇದಾದ ಬಳಿಕ , ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ಟೈಗರ್’ ಮುಂತಾದ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಈ ಚಿತ್ರಗಳು ಅಷ್ಟಾಗಿ ಯಶಸ್ಸು ತಂದುಕೊಡಲಿಲ್ಲ. 2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿದ್ದಾಗ ಸ್ವಯಂ ನಿವೃತ್ತಿ ಪಡೆದರು.

ಶಿವರಾಮ್ ರಾಜಕೀಯ: ನಿವೃತ್ತಿ ನಂತರ ಕಾಂಗ್ರೆಸ್ ಪಕ್ಷ ಸೇರಿದರು. ನಂತರ ಜೆಡಿಎಸ್ ಜೊತೆಗೆ 2014 ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ, ರಾಜ್ಯ ಕಾರ್ಯಕಾರಿ ಸಮಿತಿಗೆ ನೇಮಕವಾಗಿದ್ದರು. ಕೆ. ಶಿವರಾಮ್ ಪತ್ನಿ ವಾಣಿ ಶಿವರಾಮ್, ಪುತ್ರಿ, ಅಳಿಯ ಪ್ರದೀಪ್ ಸೇರಿದಂತೆ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

SCROLL FOR NEXT