ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತೀವ್ರ ವಿರೋಧದ ನಡುವೆಯೂ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ದಪಡಿಸಿದ ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು. ವರದಿ ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಸ್ವೀಕರಿಸಿದ್ದೇನೆ. ವರದಿಯಲ್ಲಿ ಏನಿದೆ ಎಂದು ನಾನು ನೋಡಿಲ್ಲ.
ಕ್ಯಾಬಿನೆಟ್ನಲ್ಲಿ ಜಾತಿಗಣತಿ ವರದಿ ಚರ್ಚೆ ಮಾಡುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳತ್ತೇವೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ವರದಿ ಸಿದ್ಧಪಡಿಸಿದ್ದೇವೆ. ಜಾತಿಗಣತಿ ವರದಿಗೆ ಕಾರ್ಯದರ್ಶಿ, ಎಲ್ಲಾ ಸದಸ್ಯರು ಸಹಿಯೂ ಇದೆ. ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ನಾವು ಸಿದ್ಧಪಡಿಸಿದ ಜಾತಿ ಗಣತಿಯ ವರದಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು, ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕೆ 1,580 ಕೊಟಿ ರೂ. ಮೀಸಲಿರಿಸಿದ್ದು, 8 ವಿಭಾಗಗಳ ರಚನೆಯನ್ನು ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. 12,370 ಕೋಟಿ ರೂಪಾಯಿ ಗಾತ್ರದ ಮುಂಗಡ ಪತ್ರ ಇದಾಗಿದ್ದು, ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಮಂಡಿಸಿದರು.ಕಳೆದ ವರ್ಷಕ್ಕಿಂತ ಈ ಬಾರಿಯ ಬಜೆಟ್ 484 ಕೋಟಿ ರೂ. ಹೆಚ್ಚಾಗಿದೆ. ಬಿಬಿಎಂಪಿ ತನ್ನ ಬಜೆಟ್‌ನಲ್ಲಿ 200 ಕೋಟಿ ರೂ ವೆಚ್ಚದಲ್ಲಿ ಸುರಂಗ ರಸ್ತೆಗಳನ್ನು ಮಾಡುವುದಾಗಿ ಘೋಷಿಸಿದೆ. ಮುಂಬೈ ಪಾಲಿಕೆಯ ಮೆಡಿಕಲ್ ಕಾಲೇಜುಗಳು ಮೇಲ್ಪಂಕ್ತಿಯಲ್ಲಿರುವ ಮಾದರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೂಡಾ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ಭರವಸೆಯನ್ನು ಬಜೆಟ್ ನಲ್ಲಿ ನೀಡಲಾಗಿದೆ.
ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ಕಾಂಗ್ರೆಸ್‌ನ 44 ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ಲಭ್ಯವಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಾಧುಕೋಕಿಲ ನೇಮಕಗೊಂಡಿದ್ದರೆ, ವಿಜಯ್ ಕೆ.ಮುಳುಗುಂದ್ ಅವರನ್ನು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮಕ್ಕೆ ಆರ್. ಸಂಪತ್ ರಾಜ್ ಅವರನ್ನು ನೇಮಕ ಮಾಡಲಾಗಿದೆ. ಕಂಠೀರವ ಸ್ಟುಡಿಯೋಗೆ ಮೆಹಬೂಬ್ ಪಾಷಾ, ದೇವರಾಜು ಅರಸು ಟ್ರಕ್ ಟರ್ಮಿನಲ್ ಗೆ ಮಜರ್ ಖಾನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯಾಗಿದ್ದ, ಬಿಜೆಪಿ ಮುಖಂಡ, ನಟ ಕೆ ಶಿವರಾಮ್ ಇಂದು ನಿಧನರಾದರು. ಶಿವರಾಮ್ ಹೃದಯಾಘಾತಕ್ಕೀಡಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ಶಿವರಾಮ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಿವರಾಮ್ ಅವರು 1993ರಲ್ಲಿ ಸಿನಿರಂಗಕ್ಕೆ ಪ್ರವೇಶಿಸಿ ನಾಗತಿಹಳ್ಳಿ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು.
ವಿಧಾನಸಭೆಯ ಹೊರಗೆ 'ಪಾಕಿಸ್ತಾನ ಪರ' ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರ ಬೆಂಬಲಿಗನೊಬ್ಬರನ್ನು ಹಾವೇರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ವ್ಯಾಪಾರಿಯಾಗಿರುವ ಮೊಹಮ್ಮದ್ ಶಾಫಿ ನಾಶಿಪುಡಿ ಬಂಧಿತ ವ್ಯಕ್ತಿಯಾಗಿದ್ದು, ಪಾಕಿಸ್ತಾನ ಪರ ಘೋಷಣೆಯ ವಿಡಿಯೋದಲ್ಲಿನ ಧ್ವನಿಯನ್ನು ಪರಿಶೀಲಿಸಲು ಶಫಿ ಅವರ ಧ್ವನಿ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಸರ್ಕಾರ ಮತ್ತೆ 2 ವಾರಗಳ ಕಾಲ ವಿಸ್ತರಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ ಕಾಲ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.