ರಾಜ್ಯ

ಟ್ರಾಫಿಕ್ ಸಮಸ್ಯೆ: ಮುಂದಿನ ವಿಚಾರಣೆಯವರೆಗೆ ಮಾಲ್ ಆಫ್ ಏಷ್ಯಾ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ

Srinivasamurthy VN

ಬೆಂಗಳೂರು: ಟ್ರಾಫಿಕ್ ಸಮಸ್ಯೆ ಹಿನ್ನಲೆಯಲ್ಲಿ ಪೊಲೀಸರಿಂದ ಸಾರ್ವಜನಿಕ ನಿರ್ಬಂಧ ಕ್ರಮ ಎದುರಿಸಿದ್ದ ಮಾಲ್‌ ಆಫ್‌ ಏಷ್ಯಾ ವಿರುದ್ಧ ಮುಂದಿನ ವಿಚಾರಣೆಯವರೆಗೆ ಕ್ರಮಕ್ಕೆ ಮುಂದಾಗದಂತೆಸ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಡಿಸೆಂಬರ್ 31ರ ಒಂದು ದಿನದ ಮಟ್ಟಿಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಾಲ್‌ ಪರ ವಕೀಲರ  ಭರವಸೆ ದಾಖಲಿಸಿಕೊಂಡ ಹೈಕೋರ್ಟ್, ಮುಂದಿನ ವಿಚಾರಣೆವರೆಗೂ ಅದರ ವಿರುದ್ದ ಕ್ರಮಕ್ಕೆ ಮುಂದಾಗದಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಡಿಸೆಂಬರ್ 31 ಮತ್ತು ಜನವರಿ 15ರ ನಡುವೆ ಹದಿನಾರು ದಿನಗಳ ಕಾಲ ಮಾಲ್‌ಗೆ ಸಾರ್ವಜನಿಕರು ಪ್ರವೇಶಿಸುವುದನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶವನ್ನು ಮಾಲ್‌ ಆಫ್ ಏಷ್ಯಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಭಾನುವಾರ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜೆ ಎಸ್ ಕಮಲ್ ಅವರಿದ್ದ  ವಿಶೇಷ ಪೀಠ ಈ ವಿಚಾರ ತಿಳಿಸಿತು.

ವಿಚಾರಣೆ ವೇಳೆ ಮಾಲ್‌ ಪರ ವಕೀಲರು “ಡಿ. 31ರ ಮಟ್ಟಿಗೆ ಮಾಲ್‌ ಮುಚ್ಚಲಾಗುವುದು. ಜೊತೆಗೆ, ಪೊಲೀಸ್ ಆಯುಕ್ತರ ಆದೇಶದಲ್ಲಿ ತಿಳಿಸಿರುವ ಸಮಸ್ಯೆಗಳ ಬಗ್ಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ಪೀಠ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವವರೆಗೆ ಅಥವಾ ನ್ಯಾಯಾಲಯದಿಂದ ಮುಂದಿನ ಆದೇಶ ನೀಡುವವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಮಾಲ್ ಆಫ್ ಏಷ್ಯಾಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದ ಕ್ರಮವನ್ನು ಅರ್ಜಿದಾರರು ವ್ಯವಹಾರ ಸಂಪೂರ್ಣವಾಗಿ ತಡೆಯುವ ಆದೇಶ ಎನ್ನಲಾಗದು. ಇದು ಅರ್ಜಿದಾರರು ಮತ್ತು ಪ್ರತಿವಾದಿ ಪೊಲೀಸ್ ಆಯುಕ್ತರ ನಡುವಿನ ಚರ್ಚೆಯ ವಿಷಯವಾಗಿದೆ.  ಇದು ಕೇವಲ ಆದೇಶದಿಂದ ಜಾರಿಗೆ ತರುವಂಥದ್ದಲ್ಲ ಎಂದು ಪೀಠ ತಿಳಿಸಿತು.

ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ  ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಮಾಲ್ ಆಫ್ ಏಷ್ಯಾ ಅಕ್ಟೋಬರ್ 22, 2023ರಂದು ಕಾರ್ಯಾರಂಭ ಮಾಡಿತ್ತು. ಪಾರ್ಕಿಂಗ್ ಸೌಲಭ್ಯ, ಟ್ರಾಫಿಕ್ ನಿಯಂತ್ರಣ ಮತ್ತಿತರ ವಿಚಾರಗಳ ಬಗ್ಗೆ ಮಾಲ್ ಆಡಳಿತ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಕೋರಿ ನಗರದ ಪೊಲೀಸರು ಅಕ್ಟೋಬರ್ 11, 2023 ರಂದು ನೋಟಿಸ್ ನೀಡಿದ್ದರು. ಇದಕ್ಕೆ ಅಕ್ಟೋಬರ್ 20 ರಂದು ಪ್ರತಿಕ್ರಿಯಿಸಿದ್ದ ಮಾಲ್ ಅಗತ್ಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿತ್ತು. ಇದಾದ ಬಳಿಕ  ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಡಿಸೆಂಬರ್ 30 ರಂದು ಹೊರಡಿಸಲಾಗಿತ್ತು.

ವಾಹನ ದಟ್ಟಣೆ, ಸಂಚಾರ ಅಸ್ತವ್ಯಸ್ತತೆ ಹಿನ್ನೆಲೆಯಲ್ಲಿ 2023 ಡಿಸೆಂಬರ್  31ರಿಂದ 2024ರ ಜನವರಿ 15ರವರೆಗೆ ಮಾಲ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವಂತೆ ಪೊಲೀಸರು ನಿರ್ದೇಶಿಸಿದ್ದರು. ಅಲ್ಲದೆ, ಮಾಲ್ ಮಂಭಾಗದಲ್ಲೂ ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಙೆ ಜಾರಿ ಮಾಡಿ ಪೊಲೀಸ್ ಕಮಿಷನರ್ ಆದೇಶಿಸಿದ್ದರು.ಇದನ್ನು ಪ್ರಶ್ನಿಸಿ ಮಾಲ್ ಹೈಕೋರ್ಟ್ ಮೆಟ್ಟಿಲೇರಿತ್ತು.
 

SCROLL FOR NEXT