ರಾಜ್ಯ

ಅಂಗಾಂಗ ಕಸಿ: ಕಳೆದ ವರ್ಷ 22 ಬಾರಿ 'ಗ್ರೀನ್ ಕಾರಿಡಾರ್' ಕಲ್ಪಿಸಿ ಹಲವು ಜೀವನಗಳಿಗೆ ಬೆಂಗಳೂರು ಪೊಲೀಸರು ನೆರವು!

Manjula VN

ಬೆಂಗಳೂರು: ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಗಳಿಗೆ ಅಂಗಾಂಗ ಜೋಡಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೃದಯ ಸೇರಿದಂತೆ ವಿವಿಧ ಅಂಗಾಗಳನ್ನು ಸಾಗಿಸಲು ನಗರ ಸಂಚಾರ ವಿಭಾಗದ ಪೊಲೀಸರು, 2023ರಲ್ಲಿ 22 ಬಾರಿ ‘ಗ್ರೀನ್‌ ಕಾರಿಡಾರ್‌’ ವ್ಯವಸ್ಥೆ ಕಲ್ಪಿಸಿ, ಹಲವು ಜೀವನಗಳಿಗೆ ನೆರವಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಅಸಂಖ್ಯಾತ ಜನರು ಆಗಮಿಸುತ್ತಾರೆ. ಅಂಗಾಂಗ ಕಸಿ ಸೇರಿದಂತೆ ಜೀವನ್ಮರಣದ ಹೊತ್ತಿನ ಮಹತ್ವದ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳು ಹಾಗೂ ಜೀವಂತ ಹೃದಯಗಳನ್ನು ಕೊಂಡೊಯ್ಯುವ ವಾಹನಗಳಿಗೆ ಗ್ರೀನ್ ಕಾರಿಡಾನ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಸಂಚಾರ)ಎಂ.ಎನ್.ಅನುಚೇತ್ ಅವರು ಹೇಳಿದ್ದಾರೆ.

ಇದರಂತೆ ಕಳೆದ ವರ್ಷ 2023ರಲ್ಲಿ 22 ಬಾರಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ದಿನ ಸರಿ ಸುಮಾರು 500 ಆ್ಯಂಬುಲೆನ್ಸ್ ಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ಶ್ರಮಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಏಪ್ರಿಲ್ 30 ರಂದು ಕೆಂಪೇಗೌಡ ಇಂಟರ್‍ನ್ಯಾಷನಲ್ ಏರ್‍ಪೆಪೋರ್ಟ್‍ನಿಂದ ಮಣಿಪಾಲ್ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲು 40 ಕಿ.ಮೀ. ದೂರವನ್ನು 35 ನಿಮಿಷದಲ್ಲಿ ಕ್ರಮಿಸಿದೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಇಷ್ಟು ಸಂಚಾರದ ಸಮಯ 1 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.

ಅಕ್ಟೋಬರ್ 15 ರಂದು ಅಪೋಲೊ ಆಸ್ಪತ್ರೆ ಎಸ್.ಎಸ್.ಪುರಂ ನಿಂದ ಸ್ಪರ್ಶ ಆಸ್ಪತ್ರೆ ಆರ್.ಆರ್.ನಗರಕ್ಕೆ ಹೃದಯವನ್ನು 12 ಕಿ.ಮೀ. ದೂರವನ್ನು 30 ನಿಮಿಷದಲ್ಲಿ ಕ್ರಮಿಸಿ ಸಾಗಿಸಲಾಗಿದೆ. ಗ್ರೀನ್‌ ಕಾರಿಡಾರ್‌ ಮೂಲಕ 10 ಹೃದಯ, ಕರುಳು, ಸೇರಿದಂತೆ ವಿವಿಧ ಅಂಗಾಂಗಳನ್ನು ರವಾನೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಹೆಲಿಕಾಪ್ಟರ್‌ ಮೂಲಕ ತರಲಾದ ಅಂಗಾಂಗಳನ್ನು ಅತ್ಯಂತ ಕಡಿಮೆ ಅವಧಿಗೆ ಗ್ರೀನ್‌ ಕಾರಿಡಾರ್‌ ಮೂಲಕ ತಲುಪಿಸಲಾಗಿದೆ.

ಅಂಬ್ಯುಲೆನ್ಸ್ ಚಾಲಕರು ತುರ್ತು ಸಮಯದಲ್ಲಿ 112ಕ್ಕೆ ಮಾಹಿತಿ ನೀಡಿದರೆ ಸಂಚಾರಿ ಪೊಲೀಸರು ಅಂತಹ ಆ್ಯಂಬುಲೆನ್ಸ್​​ಗಳಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆಂದು ತಿಳಿಸಿದ್ದಾರೆ.

SCROLL FOR NEXT