ರಾಜ್ಯ

ಬೆಂಗಳೂರು: ನಕಲಿ ನೋಂದಣಿ ಮಾಡಿಸಿಕೊಂಡ ಕೆಂಗೇರಿ ಬಿಡಿಎ ಅಪಾರ್ಟ್ಮೆಂಟ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲು

Lingaraj Badiger

ಬೆಂಗಳೂರು: ಫ್ಲ್ಯಾಟ್ ಗಳ ನಕಲಿ ನೋಂದಣಿ ಮಾಡಿಸಿಕೊಂಡ ಆರೋಪದ ಮೇಲೆ ಕೆಂಗೇರಿಯಲ್ಲಿರುವ ಬಿಡಿಎ ವಸತಿ ಅಪಾರ್ಟ್‌ಮೆಂಟ್ ಸಮುಚ್ಚಯದ ಕೆಲವು ಫ್ಲ್ಯಾಟ್ ಮಾಲೀಕರ ವಿರುದ್ಧ ಮತ್ತು ‘ಕೈಲಾಶ್ ಪ್ರಾಪರ್ಟೀಸ್’ ವಿರುದ್ಧ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಕೇಸ್ ದಾಖಲಿಸಿದ್ದಾರೆ.

ಲೋಕಾಯುಕ್ತರನ್ನು ಸಂಪರ್ಕಿಸುವುದು ಸೇರಿದಂತೆ ಮತ್ತೊಬ್ಬ ಫ್ಲ್ಯಾಟ್ ಮಾಲೀಕ ಕೆಎಸ್ ರವಿಕುಮಾರ್ ಎಂಬ ವಕೀಲರ ಸತತ ಎಂಟು ವರ್ಷಗಳ ಹೋರಾಟದ ನಂತರ ವಂಚಕರ ವಿರುದ್ಧ ಕೊನೆಗೂ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕರ್ನಾಟಕ ನೋಂದಣಿ ಕಾಯಿದೆ 1908 (ಸೆಕ್ಷನ್ 82 ಮತ್ತು 83) ಅಡಿಯಲ್ಲಿ 2024 ರ ಜನವರಿ 2 ರಂದು ಹಿರಿಯ ಅಧಿಕಾರಿ ವೈ.ಎಚ್.ವೆಂಕಟೇಶ್ ಅವರು ಪ್ರಕರಣ ದಾಖಲಿಸಿದ್ದಾರೆ. ಫ್ಲಾಟ್ ಮಾಲೀಕ ಗಣಪತಿ ಹೆಗಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರವಿಕುಮಾರ್, "ಹೆಗ್ಡೆ ಅವರು ಅಕ್ಟೋಬರ್ 16, 2015 ರಂದು ಅಪಾರ್ಟ್‌ಮೆಂಟ್‌ಗೆ ಡಿಕ್ಲರೇಶನ್ ಡೀಡ್ ಅನ್ನು ನೋಂದಾಯಿಸಿಕೊಂಡಿದ್ದಾರೆ. ಈ ಡೀಡ್ ನಿರ್ದಿಷ್ಟ ಆಸ್ತಿಯಲ್ಲಿರುವ ಎಲ್ಲಾ ಆಸ್ತಿಗಳನ್ನು ನಿರ್ದಿಷ್ಟಪಡಿಸುತ್ತದೆ ಮತ್ತು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ, 1972 ರ ಸೆಕ್ಷನ್ 13 (2) ರ ಪ್ರಕಾರ ಮಾಲೀಕರು ಅಥವಾ ಪ್ರವರ್ತಕರು ನೋಂದಣಿ ಮಾಡಬಹುದು. ಆದರೆ ಫ್ಲಾಟ್ ಖರೀದಿದಾರರು ಇದನ್ನು ಮಾಡುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ.

ಬಿಡಿಎ ಕಾಂಪ್ಲೆಕ್ಸ್‌ನಲ್ಲಿ 300 ಫ್ಲ್ಯಾಟ್‌ಗಳಿದ್ದು, ಬಿಡಿಎ ಇದನ್ನು ನೋಂದಣಿ ಮಾಡಬೇಕಿತ್ತು. ಆದರೆ ಬಿಡಿಎ ಆ ಕೆಲಸ ಮಾಡಲಿಲ್ಲ ಎಂದು ರವಿ ಕುಮಾರ್ ಅವರು ಹೇಳಿದ್ದಾರೆ.

ಈ ಸಂಬಂಧ ವಕೀಲರು ಆಗಿರುವ ರವಿಕುಮಾರ್ ಅವರು, 2022 ರ ಡಿಸೆಂಬರ್‌ನಲ್ಲಿ ಜಯನಗರದ ಜಿಲ್ಲಾ ನೋಂದಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದರು ಮತ್ತು ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಆದರೆ ಅವರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಳೆದ ಜೂನ್ 2023 ರಲ್ಲಿ ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಶನ್(ಐಜಿಆರ್) ಅವರನ್ನು ಸಂಪರ್ಕಿಸಿದ್ದಾರೆ. ಐಜಿಆರ್ ಕೂಡ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಂತಿಮವಾಗಿ ನಾನು ಲೋಕಾಯುಕ್ತರನ್ನು ಸಂಪರ್ಕಿಸಿ ದೂರು ದಾಖಲಿಸಿದೆ ಎಂದಿದ್ದಾರೆ.

ಬಳಿಕ ಐಜಿಆರ್ ಜಿಲ್ಲಾ ನೋಂದಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದ್ದು, ನಂತರ ಸ್ಥಳೀಯ ಕೆಂಗೇರಿ ಕಚೇರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಂತಿಮವಾಗಿ, ಜನವರಿ 2 ರಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೆಲವು ಫ್ಲಾಟ್ ಮಾಲೀಕರು ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರವಿಕುಮಾರ್, ಈ ಕಾನೂನುಬಾಹಿರ ಚಟುವಟಿಕೆಯನ್ನು ಪ್ರಶ್ನಿಸಿದ್ದಕ್ಕೆ ತನ್ನ ಮನೆಗೆ ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಹಲವು ಬಾರಿ ಕಡಿತಗೊಳಿಸಲಾಯಿತು ಮತ್ತು ನಿರ್ವಹಣೆ ಶುಲ್ಕವನ್ನು ಅಗತ್ಯಕ್ಕಿಂತ ಹೆಚ್ಚು ವಿಧಿಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

SCROLL FOR NEXT