ರಾಜ್ಯ

ಅರ್ಜುನನ ಸಾವಿನ ಬೆನ್ನಲ್ಲೇ ಕಾಡಾನೆ 'ಸಾರಾಮಾರ್ಟಿನ್' ಹೆಡೆಮುರಿ ಕಟ್ಟಿದ 'ಅಭಿಮನ್ಯು ತಂಡ'

Srinivasamurthy VN

ಹಾಸನ: ದಸರಾ ಆನೆ ಅರ್ಜುನನ ಕೊಂದು ಭೀತಿ ಹುಟ್ಟಿಸಿದ್ದ ಒಂಟಿ ಸಲಗದ ಹೆಡೆಮುರಿ ಕಟ್ಟುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಸಾರಾಮಾರ್ಟಿನ್ ಎಂದು ಕರೆಯಲಾಗುತ್ತಿದ್ದ ಕಾಡಾನೆಯನ್ನು 'ಅಭಿಮನ್ಯು ನೇತೃತ್ವದ  ಆನೆಗಳ ತಂಡ ಸೆರೆ ಹಿಡಿದಿವೆ.

ಹೌದು.. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಮತ್ತು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಭಯದ ವಾತಾವರಣ ನಿರ್ಮಿಸಿದ್ದ ‘ಸಾರಾ ಮಾರ್ಟಿನ್’ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಸೆರೆ ಹಿಡಿದಿದ್ದಾರೆ. 

ಅರ್ಜುನ ಆನೆ ಸಾವಿನ ಬಳಿಕ ಸತತ ಒತ್ತಡ-ಹೋರಾಟದ ಬಳಿಕ ಕೊನೆಗೂ ಅರಣ್ಯ ಇಲಾಖೆ ಈ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಕಾಡಾನೆಯನ್ನು ನಾಗರಹೊಳೆಯ ಮತ್ತಿಗೋಡು ಆನೆ ಕ್ಯಾಂಪ್‍ಗೆ ಲಾರಿಯಲ್ಲಿ ಸಾಗಿಸಲಾಗಿದ್ದು, ಅಲ್ಲಿಯೇ ಅದನ್ನು ತರಬೇತಿಗೆ ಹಾಕುವ ಕುರಿತು ಅರಣ್ಯ ಇಲಾಖೆ ನಿರ್ಧರಿಸಲಿದೆ ಎಂದು ಹೇಳಲಾಗಿದೆ.

ಆನೆ ಸೆರೆಗೆ ಜನವರಿ12ರಿಂದ ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮದಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಉಪ ನಿರ್ದೇಶಕ ಸೌರಭ್ ಕುಮಾರ್ ನೇತೃತ್ವದಲ್ಲಿ, ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಸಹರಾ ಎಸ್ಟೇಟ್‍ನಲ್ಲಿ ಪ್ರಾರಂಭಿಸಲಾಯಿತು. ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ದಸರಾ ಆನೆ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ಈ ಕುರಿತು ಮಾತನಾಡಿದ ಡಿಎಫ್‌ಒ ಸೌರಭ್ ಕುಮಾರ್ ‘ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಇಲಾಖೆ ಸೂಚನೆಯಂತೆ ಉಳಿದ ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಎಸ್ಟೇಟ್‍ನಲ್ಲಿ ಕಾಡಾನೆ ಬೀಡು ಬಿಟ್ಟಿದ್ದರಿಂದ ಸ್ಥಳೀಯರು ‘ಸಾರಾ ಮಾರ್ಟೀನ್’ ಎಂದು ಕರೆಯುತ್ತಿದ್ದರು. ಈ ಆನೆ ಒಂಟಿಯಾಗಿ ಓಡಾಡಿಕೊಂಡಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿದರೂ ಜನರಿಗೆ ತೊಂದರೆ ಆಗಿರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದಾಗ, ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಸಾವನ್ನಪ್ಪಿತ್ತು. ಅದಕ್ಕಿಂತ ಮೊದಲು, ಶಾರ್ಪ್ ಶೂಟರ್ ವೆಂಕಟೇಶ್ ಎನ್ನುವವರು ಭೀಮ ಎಂಬ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.
 

SCROLL FOR NEXT