ರಾಜ್ಯ

ಬೆಂಗಳೂರು: ಹಾನಿಯಾದ ನಾಮಫಲಕ ಸರಿಪಡಿಸಲು ಸಚಿವರ ಸಹಾಯ ಕೋರಿದ ಹುತಾತ್ಮ ಯೋಧನ ತಾಯಿ

Lingaraj Badiger

ಬೆಂಗಳೂರು: 2016ರ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಅವರ ಗೌರವಾರ್ಥ ಸಾದಹಳ್ಳಿ ರಸ್ತೆಗೆ ಅವರ ಹೆಸರಿಡಲಾಗಿದ್ದು, ರಸ್ತೆಯಲ್ಲಿದ್ದ ನಾಮಫಲಕಕ್ಕೆ ಕಳೆದ ಭಾನುವಾರ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪುಡಿ ಪುಡಿಯಾಗಿದೆ.

ಹಾನಿಗೊಳಗಾದ ನಾಮಫಲಕವನ್ನು ಪುನಃಸ್ಥಾಪಿಸಲು ಸ್ಥಳೀಯ ಶಾಸಕರೂ ಆಗಿರುವ ಸಚಿವ ಕೃಷ್ಣ ಬೈರೇಗೌಡ ಅವರು ಮಧ್ಯಪ್ರವೇಶಿಸಬೇಕು ಎಂದು ಕೋರಿ ಮೇಜರ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಅವರು ಭಾನುವಾರ ಎಕ್ಸ್ ಮೂಲಕ ಮನವಿ ಮಾಡಿದ್ದಾರೆ. ಹಾನಿಗೊಳಗಾದ ಫಲಕದ ಚಿತ್ರವನ್ನು ಸಹ ಮೇಘನಾ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನು ಗಿರೀಶ್ ಅವರ ತಂದೆ ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು, ಈ ಬೋರ್ಡ್ ಅಪಘಾತದಲ್ಲಿ ಹಾನಿಯಾಗಿದೆ. ಇದನ್ನು ಯಾವುದೇ  ದುಷ್ಕರ್ಮಿಗಳು ಹಾನಿ ಮಾಡಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಡಿಸೆಂಬರ್ 2020 ರಲ್ಲಿ ಸಾದಹಳ್ಳಿ ರಸ್ತೆಗೆ ಮೇಜರ್ ಗಿರೀಶ್ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು ಮತ್ತು ಅಕ್ಷಯ್ ಗಿರೀಶ್ ಅವರ ಹೆಸರಿನ ನಾಮಫಲಕವನ್ನು ಕೃಷ್ಣಭೈರೇಗೌಡ ಅವರು ಉದ್ಘಾಟಿಸಿದ್ದರು.

''ಘಟನೆಯ ಹಿಂದೆ ಯಾವುದೇ ದುರುದ್ದೇಶವಿಲ್ಲ. ಫಲಕವನ್ನು ಪುನಃಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಭಾನುವಾರ ಸಂಜೆ ದೂರು ಸ್ವೀಕರಿಸಲಾಗಿದೆ. ಭಾನುವಾರ ಬೆಳಗ್ಗೆ ಪಾನಮತ್ತ ಚಾಲಕನಿಂದ ಫಲಕಕ್ಕೆ ಹಾನಿಯಾಗಿದೆ. ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೋಸ್ಟ್‌ಗೆ ಮಾಜಿ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಅವರು ಪ್ರತಿಕ್ರಿಯಿಸಿದ್ದು, “ಇದು ಹೃದಯಹೀನ, ಕ್ರೂರ ಕೃತ್ಯವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಯಾಗಬೇಕು. ಫಲಕವನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲಾಗುವುದು ಎಂದು ನಾನು ಭಾವಿಸುತ್ತೇನೆ sic)” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

SCROLL FOR NEXT