ರಾಜ್ಯ

ಚುನಾವಣೆಗೆ ಸ್ಪರ್ಧಿಸಲು ಸುಳ್ಳು ಜಾತಿ ಪ್ರಮಾಣ ಪತ್ರ ಒದಗಿಸಿದ ಮಾಜಿ ಶಾಸಕ: ಹೈಕೋರ್ಟ್

Nagaraja AB

ಬೆಂಗಳೂರು: ಮುಳಬಾಗಲು ಮಾಜಿ ಶಾಸಕ ಜಿ.ಮಂಜುನಾಥ ಅವರು ಬುಡಗ ಜಂಗಮ, ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಒಬಿಸಿ ಗುಂಪಿಗೆ ಬರುವ ಬೈರಾಗಿ ಜಾತಿಗೆ ಸೇರಿದವರು ಎಂದು ಸ್ಪಷ್ಟಪಡಿಸಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ (ಡಿಸಿವಿಸಿ) ನಿರ್ಣಯದಲ್ಲಿ ಯಾವುದೇ ದೋಷ ಕಂಡು ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. 

“ಅರ್ಜಿದಾರರು ಸುಳ್ಳು ಜಾತಿ ಪ್ರಮಾಣ ಪತ್ರದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದು, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಮೀಸಲಾದ ಕ್ಷೇತ್ರವನ್ನು ಕಸಿದುಕೊಂಡು ಶಾಸಕರೂ ಆಗಿರುವುದು ಸ್ಪಷ್ಟ ಪ್ರಕರಣವಾಗಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಾನೂನು ಪ್ರಕಾರ ಆದೇಶದ ಸಂದರ್ಭದಲ್ಲಿ ಮಾಡಲಾದ ಅವಲೋಕನಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲು ರಾಜ್ಯಕ್ಕೆ ಮುಕ್ತವಾಗಿ ಬಿಡುತ್ತೇನೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.

ಮಂಜುನಾಥ ಅವರು ಬುಡಗ ಜಂಗಮ ಜಾತಿಗೆ ಸೇರಿದವರಲ್ಲ ಎಂದು ಡಿಸಿವಿಸಿ 2021ರ ಅಕ್ಟೋಬರ್ 27ರಂದು ಸಲ್ಲಿಸಿದ್ದ ವರದಿಯಲ್ಲಿನ ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. 

ಬುಡಗ ಜಂಗಮ ಜಾತಿಗೆ ಸೇರಿದವರು ಎಂದು ಸಾಬೀತುಪಡಿಸಲು ಅರ್ಜಿದಾರರಿಂದ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದ ಮುಳಬಾಗಲು ಮೀಸಲು ಕ್ಷೇತ್ರದ ಪಕ್ಷೇತರ ಶಾಸಕರಾಗಿ ಮಂಜುನಾಥ ಅವರನ್ನು ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ 2013ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 2018ರಲ್ಲಿ  ಅರ್ಜಿದಾರರು ಬುಡಗ ಜಂಗಮ ಜಾತಿಗೆ ಸೇರಿದವರಲ್ಲ ಬದಲಿಗೆ ಬೈರಾಗಿ ಜಾತಿಗೆ ಸೇರಿದವರು ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

SCROLL FOR NEXT