ರಾಜ್ಯ

ಬರ ಪರಿಹಾರ ಬಿಡುಗಡೆಗೆ 'ಜಂಟಿ ಖಾತೆ' ಅನಿವಾರ್ಯ: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ

Manjula VN

ತುಮಕೂರು: ರಾಜ್ಯ ಜಂಟಿ ಖಾತೆ ಮಾಡಿದರಷ್ಟೇ ಪರಿಹಾರ ಬಿಡುಗಡೆಯಾಗಲಿದೆ ಎಂಬುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬುಧವಾರ ಹೇಳಿದರು.

ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಕೊಬ್ಬರಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಶೋಭಾ ಅವರು, ರಾಜ್ಯದಿಂದ ಹಲವಾರು ಬಾರಿ ಮನವಿ ಮಾಡಿದರೂ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು,

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾಗುತ್ತಿರುವ ಯಾವುದೇ ಯೋಜನೆಗಳಲ್ಲಿ ಅನುದಾನ ಸಿಗಬೇಕಾದರೆ ಇನ್ನು ಮುಂದೆ ಜಂಟಿ ಖಾತೆ ತೆರೆಯುವುದು ಕಡ್ಡಾಯ. ಈ ಬಗ್ಗೆ ನೀತಿ ಆಯೋಗ ಸ್ಪಷ್ಟವಾಗಿ ಸೂಚನೆ ನೀಡಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೂ ಸಾಕಷ್ಟು ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಹಣ ನೀಡುವುದಿಲ್ಲ. ಕೇಂದ್ರದ ಹಣ ವೆಚ್ಚವಾಗಿದ್ದರೂ ಹಣ ಕೊಡದೆ ರಾಜ್ಯ ಸತಾಯಿಸುತ್ತದೆ. ಇದರಿಂದ ಯೋಜನೆ ಜಾರಿ ಮಾಡುವುದು ಕಷ್ಟಕರವಾಗುತ್ತದೆ. ಹಾಗಾಗಿ ಜಂಟಿ ಖಾತೆ ಕಡ್ಡಾಯ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ, ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರವು ಯಾವುದೇ ರಾಜ್ಯಕ್ಕೂ ತಾರತಮ್ಯ ಮಾಡುತ್ತಿಲ್ಲ. ಬರ ಪರಿಹಾರದ ನೆರವು ಪಡೆಯಬೇಕಾದರೆ ರಾಜ್ಯ ಸರಕಾರವು ರಾಜ್ಯ ಹಾಗೂ ಕೇಂದ್ರ ಸರಕಾರದ ಹೆಸರಲ್ಲಿ ಜಂಟಿ ಬ್ಯಾಂಕ್‌ ಖಾತೆ ತೆರೆಯಬೇಕು. ರಾಜ್ಯ ಸರಕಾರ ಜಂಟಿ ಖಾತೆ ತೆರೆದ ಕೂಡಲೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು. ಬರ ಪರಿಹಾರ ಮಾತ್ರವಲ್ಲದೆ, ಕೇಂದ್ರ ಸರಕಾರದ ಸಹಭಾಗಿತ್ವದ ಯೋಜನೆಗಳಲ್ಲಿ ಅನುದಾನ ಪಡೆಯಲು ಇನ್ನು ಮುಂದೆ ಜಂಟಿ ಖಾತೆ ತೆರೆಯುವುದು ಕಡ್ಡಾಯವೆಂದು ನೀತಿ ಆಯೋಗ ಸ್ಪಷ್ಟ ಸೂಚನೆ ನೀಡಿದೆ,'' ಎಂದು ಒತ್ತಿ ಹೇಳಿದರು.

ಖಾದ್ಯ ತೈಲ ಆಮದು ಅನಿವಾರ್ಯ
ವಿದೇಶಗಳಿಂದ ಖಾದ್ಯ ತೈಲ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ದೇಶದ ಒಟ್ಟು ಖಾದ್ಯ ತೈಲ ಬೇಡಿಕೆಯಲ್ಲಿ ಶೇ 20ರಷ್ಟು ನಮ್ಮಲ್ಲಿ ಉತ್ಪಾದನೆ ಆಗುತ್ತಿದೆ. ಶೇ 80ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಖಾದ್ಯ ತೈಲ ಆಮದು ನಿಲ್ಲಿಸುವಂತೆ ರೈತರು, ಸಚಿವರು ಮಾಡಿದ ಒತ್ತಾಯಕ್ಕೆ ಸ್ಪಂದಿಸಿದ ಅವರು, ‘ದೇಶದಲ್ಲಿ ಹಿಂದೆ 12.50 ಲಕ್ಷ ಎಕರೆ ಪ್ರದೇಶದಲ್ಲಿ ಎಣ್ಣೆ ಕಾಳು ಬೆಳೆಯಲಾಗುತಿತ್ತು. ಈಗ 3.50 ಲಕ್ಷ ಎಕರೆಗಳಿಗೆ ಕುಸಿದಿದೆ. ಬೇಡಿಕೆ ಪೂರೈಸಲು ಆಮದು ಅನಿವಾರ್ಯವಾಗಿದೆ. ಉತ್ಪಾದನೆ ಹೆಚ್ಚಾದರೆ ಆಮದು ಕಡಿಮೆ ಮಾಡಬಹುದು’ ಎಂದರು.

SCROLL FOR NEXT