ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹೊರಡುವುದಕ್ಕೆ ಕೆಲವೇ ಕ್ಷಣಗಳ ಮುನ್ನ, ನಾನೇನು ಬಾಂಬ್ ಅಥವಾ ಚಾಕುವನ್ನು ಹೊತ್ತೊಯ್ಯುತ್ತಿದ್ದೇನೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ.
ಕಳೆದ ಭಾನುವಾರ ಭದ್ರತಾ ತಪಾಸಣೆ ಎಲ್ಲ ಮುಗಿದು ವಿಮಾನದಲ್ಲಿ ಕುಳಿತ ನಂತರವೂ ವಿಮಾನದೊಳಗಿನ ಹೆಚ್ಚುವರಿ ತಪಾಸಣೆಯಿಂದ ಸಿಟ್ಟಿಗೆದ್ದ ಕೊಚ್ಚಿಗೆ ತೆರಳುತ್ತಿದ್ದ ಪ್ರಯಾಣಿಕ ಸಜು ಕೆ ಕುಮಾರನ್ ಅವರು ನಾನೇನು ಬಾಂಬ್ ಅಥವಾ ಚಾಕು ಹೊತ್ತೊಯ್ಯುತ್ತಿದ್ದೇನೆಯೇ? ಎಂದು ಪ್ರಶ್ನಿಸಿದ್ದಾರೆ.
ಇದರಿಂದ 38 ವರ್ಷದ ಸಜು ಅವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೆಐಎ ಬೆಳವಣಿಗೆ ಶೇ.23.3 ಕ್ಕೆ ಏರಿಕೆ: ಮಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಬೆಳವಣಿಗೆಯೂ ಏರುಗತಿಯಲ್ಲಿ
"ಸಜು ಕುಟುಂಬದಲ್ಲಿ ಸಾವು ಸಂಭವಿಸಿದೆ. ಹೀಗಾಗಿ ತರಾತುರಿಯಲ್ಲಿ ಊರಿಗೆ ತೆರಳಲು ಆರೋಪಿ ವಿಮಾನ ಪ್ರಯಾಣ ಆಯ್ಕೆ ಮಾಡಿಕೊಂಡಿದ್ದ. ವಿಮಾನ ನಿಲ್ದಾಣದಲ್ಲಿ ನಿಯಮಿತ ತಪಾಸಣೆಯ ನಂತರ ಸಜು ಕೆ ಕುಮಾರನ್‌ಗೆ ವಿಮಾನ ಹತ್ತಲು ಅನುಮತಿಸಲಾಯಿತು. ಆದರೆ ಭದ್ರತಾ ಸಿಬ್ಬಂದಿ ಮತ್ತೆ ಅವರ ಬ್ಯಾಗ್ ಅನ್ನು ಪರಿಶೀಲಿಸಲು ಬಯಸಿದ್ದರಿಂದ ಅವರು ಆಕ್ರೋಶದಿಂದ ಹಾಗೆ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆಗೆ ಅವರ ಉಪಸ್ಥಿತಿಯ ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.