ರಾಜ್ಯ

ಮಲಹೊರುವ ಪದ್ಧತಿ: 31 ವರ್ಷಗಳಲ್ಲಿ 47 ಪ್ರಕರಣ, 92 ಸಾವು, ಒಂದು ಪ್ರಕರಣದಲ್ಲಿ ಶಿಕ್ಷೆ; ಹೈಕೋರ್ಟ್'ಗೆ ಸರ್ಕಾರದ ವಿವರಣೆ

Manjula VN

ಬೆಂಗಳೂರು: ರಾಜ್ಯದಲ್ಲಿ ಮಲ ಹೋರುವ ಪದ್ದತಿ ನಿಷೇಧವಿದ್ದರೂ 1993ರಿಂದ ಇಲ್ಲಿವರೆಗೆ ಒಟ್ಟು 47 ಪ್ರಕರಣಗಳು ದಾಖಲಾಗಿದ್ದು, 92 ಮಂದಿ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಈವರೆಗೆ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಅದೇ ರೀತಿ ಮಲಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ-2013ರ ಉಲ್ಲಂಘನೆಯಡಿ 87 ಪ್ರಕರಣ ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

ಮಲಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ -2013ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಎಐಸಿಸಿಟಿಯುನ ಕರ್ನಾಟಕ ಘಟಕ ಹಾಗೂ ಇದೇ ವಿಚಾರವಾಗಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ  ಹಾಗೂ ರಾಜ್ಯದಲ್ಲಿ ಮಲ ಹೊರುವ ಪದ್ದತಿ ಜೀವಂತವಾಗಿರುವ ಕುರಿತು ಮಾಧ್ಯಮ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಒಟ್ಟಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಜನವರಿ 8ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್ ವಿ ಕಲಾವತಿ ಅವರ ಅನುಪಾಲನಾ ವರದಿಯನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಇಂದು ಸಲ್ಲಿಸಿದರು.

ರಾಜ್ಯದಲ್ಲಿ ನಿಷೇಧಿತ ಮಲಹೊರುವ ಪದ್ದತಿಯನ್ನು ನಿಯಂತ್ರಿಸಲು, ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆ-2013ರ ಅನ್ನು ಸಮಪರ್ಕವಾಗಿ ಜಾರಿಗೊಳಿಸಲು ಹಾಗೂ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ವೇಳೆ ಸಾವನ್ನಪ್ಪಿದವರ ಕುಟುಂಬದ ಸದಸ್ಯರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ವಿವಿಧ ಇಲಾಖೆಗಳು ಕೈಗೊಂಡ ಕ್ರಮಗಳ ಸಮಗ್ರ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿದ 47 ಪ್ರಕರಣಗಳು ರಾಜ್ಯದಲ್ಲಿ 1993ರಿಂದ ಇಲ್ಲಿವರೆಗೆ ದಾಖಲಾಗಿವೆ. ಇದರಲ್ಲಿ 92 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 15 ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಿಸಿಕೊಳ್ಳಲಾಗಿದೆ. ಒಟ್ಟು 47 ಪ್ರಕರಣಗಳಲ್ಲಿ 15 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ. 2 ಪ್ರಕರಣಗಳಲ್ಲಿ ವರದಿ ಬಾಕಿ ಇದೆ. 4 ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಸಲಾಗಿದೆ. 22 ಪ್ರಕರಣಗಳು ಇತ್ಯರ್ಥವಾಗಿವೆ.

2013ರಿಂದು ಇಲ್ಲಿಯ ತನಕ ಮಲಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ -2013ರ ಅಡಿ 87 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 11 ಪ್ರಕರಣಗಳನ್ನು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಿಸಿಕೊಳ್ಳಲಾಗಿದೆ. 28 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, 6 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. 21 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 11 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, 22 ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಮೃತಪಟ್ಟ ಕಾರ್ಮಿಕರ ಅವಲಂಬಿತರಿಗೆ ನೀಡಲಾಗುವ ಪರಿಹಾರವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಇಲ್ಲಿವರೆಗೆ 1,462 ಫಲಾನುಭವಿಗಳಿಗೆ 32.66 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ 7,483 ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರನ್ನು ಗುರುತಿಸಲಾಗಿದ್ದು, ಕೇಂದ್ರ ಸರ್ಕಾರ 1,833 ಕಾರ್ಮಿಕರಿಗೆ ತಲಾ 40 ಸಾವಿರ ರೂಪಾಯಿ ಪರಿಹಾರ ನೀಡಿದೆ. ಉಳಿದ ಕಾರ್ಮಿಕರಿಗೆ ರಾಜ್ಯ ಸರ್ಕಾರ ತಲಾ 40 ಸಾವಿರ ರೂಪಾಯಿ ಪಾವತಿಸಿದೆ.

ಶೌಚಗುಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟ ಕಾರ್ಮಿಕರ ಮಕ್ಕಳಿಗೆ ಶಾಲಾ ಸಮವಸ್ತ್ರ ವಿದ್ಯಾರ್ಥಿವೇತನ ನೀಡುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಸಮಾಜ ಕಲ್ಯಾಣ ಇಲಾಖೆಗೆ ಶಿಫಾರಸ್ಸು ಮಾಡಿದೆ. ರಾಮನಗರ, ಬೆಂಗಳೂರು, ಕಲಬುರ್ಗಿ ಹಾಗೂ ಕೋಲಾರದಲ್ಲಿ ನಡೆದ ಘಟನೆಗಳಲ್ಲಿ ಮೃತ ಕುಟುಂಬದ ಅವಲಂಬಿತ ಸದಸ್ಯರಿಗೆ ಆರ್ಥಿಕ ನೆರವು, ಪರ್ಯಾಯ ಉದ್ಯೋಗ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿತು.

ಈ ವರದಿಯನ್ನು ದಾಖಲಿಸಿಕೊಂಡ ಪೀಠವು ರಾಜ್ಯ ಸರ್ಕಾರ ಗಣನೀಯ ರೀತಿಯಲ್ಲಿ ಕ್ರಮ ಕೈಗೊಂಡಿದೆ. ಆದರೆ, ಪರಿಹಾರದ ವಿಚಾರದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟು, ಸರ್ಕಾರದ ವರದಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.

SCROLL FOR NEXT