ರಾಜ್ಯ

ಕೆರಗೋಡು: ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ರಿಜಿಸ್ಟರ್ ನಾಪತ್ತೆ; ಕೆಲಕಾಲ ಪರಿಸ್ಥಿತಿ ಉದ್ವಿಗ್ನ

Shilpa D

ಮೈಸೂರು: ಮಂಡ್ಯದ ಕೆರಗೋಡು ಗ್ರಾಮದ ಹನುಮ ಧ್ವಜ ನಿರ್ಮಾಣ ವಿವಾದ ತಾರಕಕ್ಕೇರಿದೆ. ಲೋಕಸಭಾ ಚುನಾವನೆಗೂ ಮುನ್ನ ಮಂಡ್ಯದ ಜಿಲ್ಲೆಯಲ್ಲಿ ತಮ್ಮ ಹಕ್ಕನ್ನು ಸ್ಥಾಪಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳು ಭಾರಿ ಕಸರತ್ತು ಮಾಡುತ್ತಿವೆ.

ಅದಕ್ಕೆ ಪೂರಕವೆಂಬಂತೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ಆರಂಭವಾಗಿದೆ. ಕೆರಗೋಡು ಗ್ರಾಮದ ಟ್ರಸ್ಟ್‌ನಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಹನುಮ ಧ್ವಜಸ್ತಂಭ ನಿರ್ಮಾಣ ಹಾಗೂ ಹನುಮ ಧ್ವಜಾರೋಹಣದ ಬಗ್ಗೆ ಅನುಮತಿ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಧ್ವಜ ಅಳವಡಿಕೆ ನಂತರ ಸರ್ಕಾರದಿಂದ ರಾಷ್ಟ್ರಧ್ವಜ ಹಾರಿಸಲು ಮಾತ್ರ ಅನುಮತಿ ಪಡೆಯಲಾಗಿದೆ ಎಂಬ ಪತ್ರವನ್ನು ಮಾತ್ರ ರಾಜ್ಯದ ಜನತೆಗೆ ತೋರಿಸಿ ಹನುಮಧ್ವಜವನ್ನು ತೆರವುಗೊಳಿಸಿದೆ.

ಕೆರಗೋಡು ಗ್ರಾಮದ ರಾಮಮಂದಿರದ ಮುಂದಿನ ಬಯಲು ಜಾಗದಲ್ಲಿ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ಕೇಳಿ ಗೌರಿಶಂಕರ ಟ್ರಸ್ಟ್‌ನಿಂದ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿಯನ್ನು ಪಂಚಾಯಿತಿಯಲ್ಲಿ ಜನವರಿ 27 ರಂದು ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಈ ಸಭೆಯಲ್ಲಿದ್ದ 20 ಮಂದಿ ಪೈಕಿ 18 ಜನ ಸದಸ್ಯರು ಹನುಮಧ್ವಜ ನಿರ್ಮಾಣಕ್ಕೆ ಅವಕಾಶ ನೀಡಿದ್ದರು. ಅನುಮತಿ ನೀಡಿರುವ ಬಗ್ಗೆ ನಡಾವಳಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಪಂಚಾಯಿತಿ ಅನುಮತಿ ನೀಡಿದ ಹಿನ್ನೆಲೆಯಲ್ಲಿಯೇ ಗ್ರಾಮಸ್ಥರಿಂದ ಹನುಮ ಧ್ವಜ ಹಾರಿಸಲಾಗಿತ್ತು. ಆದರೆ, ಇದೀಗ ಏಕಾಏಕಿ ಗ್ರಾಪಂ ಕಚೇರಿಯಿಂದ ನಾಪತ್ತೆಯಾಗಿದೆ.

ಮಂಗಳವಾರ ಕೆರಗೋಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರೊಸೀಡಿಂಗ್ಸ್ ಪುಸ್ತಕ (ರಿಜಿಸ್ಟರ್) ತೋರಿಸದಿದ್ದಕ್ಕೆ ಪಂಚಾಯಿತಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯನಿರ್ವಾಹಕ ಅಧಿಕಾರಿ ರಿಜಿಸ್ಟರ್ ತೆಗೆದುಕೊಂಡು ಹೋಗಿರಬಹುದು ಎಂದು ಹೇಳಿದ್ದರಿಂದ  ಪಂಚಾಯಿತಿ ಕಾರ್ಯದರ್ಶಿ ರತ್ನಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ನಡುವೆ ಪಂಚಾಯಿತಿ ಕಚೇರಿಗೆ ಆಗಮಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಅವರಿಗೆ ವಿಷಯ ತಿಳಿಸಿದರು.  ನಂತರ ಅವರು ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರೊಂದಿಗೆ ಮಾತನಾಡಿದರು, ರಿಜಿಸ್ಟರ್ ತನ್ನ ಬಳಿ ಇದೆ ಎಂದು ತಿಳಿಸಿ ಗೊಂದಲ ನಿವಾರಿಸಿದರು. ಪಂಚಾಯತ್ ರಾಜ್ ಕಾಯಿದೆಯ ನಿಬಂಧನೆಗಳ ಪ್ರಕಾರ ರಿಜಿಸ್ಟರ್ ಇಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇನ್ನೂ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದರು. ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದ ಗೌರಿಶಂಕರ ಸೇವಾ ಟ್ರಸ್ಟ್ ನವರು ಕೆರಗೋಡು ರಂಗಮಂದಿರದ ಆವರಣದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು, ಆ ಧ್ವಜಸ್ತಂಭವನ್ನು ಕರ್ನಾಟಕದ ಧ್ವಜ ಮತ್ತು ತ್ರಿವರ್ಣ ಧ್ವಜ ಹಾರಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುತ್ತೇವೆ, ಜೊತೆಗೆ ಗ್ರಾಮ ಪಂಚಾಯತಿಯ ಷರತ್ತುಗಳಿಗೆ ಬದ್ಧರಾಗಿರುವುದಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದರು.

ಅವರ ಮನವಿಯ ಮೇರೆಗೆ ಗ್ರಾಮ ಪಂಚಾಯತಿಯವರು ಧ್ವಜಸ್ತಂಭ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ. ಆ ನಂತರ ಅಲ್ಲಿ ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಆ ಜಾಗದಲ್ಲಿ ಹನುಮಧ್ವಜವನ್ನು ಹಾರಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಧ್ವಜ ಇಳಿಸುವಂತೆ ಜನರಿಗೆ ತಿಳಿ ಹೇಳಿದ್ದಾರೆ. ಆದರೆ ಸ್ಥಳೀಯರು ಪೊಲೀಸರ ಹಾಗೂ ಜಿಲ್ಲಾಡಳಿತದ ಮನವಿಯನ್ನು ತಿರಸ್ಕರಿಸಿ, ಪ್ರತಿಭಟನೆ, ಸಂಘರ್ಷಕ್ಕೆ ಇಳಿಯುವ ಮೂಲಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದಾರೆ ಎಂದು ಹೇಳಿದ್ದರು.


ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಸುಳ್ಳುಗಳನ್ನೇ ಪದೇ ಪದೆ ಒತ್ತಿ ಒತ್ತಿ ಹೇಳುವುದರಿಂದ ಅದು ನಿಜವಾಗುತ್ತೆ ಎನ್ನುವ ಭ್ರಮೆಯಲ್ಲಿ ಬುರುಡೆರಾಮಯ್ಯನವರು ತಮ್ಮ ಇಡೀ ರಾಜಕೀಯ ಜೀವನವನ್ನೇ ಕಳೆದಿದ್ದಾರೆ! ಸುಳ್ಳುಗಳ ಸರದಾರರಾಗಿರುವ ಸಿದ್ದರಾಮಯ್ಯ ಅವರು, ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೆ ಮಾತ್ರ ಸ್ಥಂಭ ನಿರ್ಮಿಸಲು ಅವಕಾಶ ಕೇಳಿದ್ದರು ಎನ್ನುವ ಮೂಲಕ ಸುಳ್ಳು ಸುದ್ದಿಯ ಸೃಷ್ಟಿಕರ್ತ ಎಂಬ ಬಿರುದನ್ನು ಗಿಟ್ಟಿಸಿಕೊಂಡಿದ್ದಾರೆ.

ಹನುಮ ಧ್ವಜ ಹಾರಿಸುವುದಕ್ಕಾಗಿಯೇ ಕೆರಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಖುದ್ದು ಅಧಿಕೃತವಾಗಿ ಅನುಮೋದನೆ ನೀಡಿದ್ದರು. ಅದನ್ನೂ ತುಘಲಕ್‌ ಸರ್ಕಾರ ಬದಲಾಯಿಸಿದ್ದೇಕೆ? ಇಷ್ಟೆಲ್ಲಾ ಆದಮೇಲೂ ಪಿಡಿಒ ಅವರನ್ನು ಅಮಾನತು ಮಾಡಿದ ಕಾರಣವೇನು? ಹನುಮ ಧ್ವಜ ಹಾರಿಸುವುದಕ್ಕೆ ಅನುಮತಿ ಕೊಟ್ಟಿರುವುದೇ? ಮುಚ್ಚಳಿಕೆ ಪತ್ರದಲ್ಲಿ ಪಿಡಿಒ ಸಹಿಯೇ ಇಲ್ಲವಲ್ಲ ಏಕೆ?

ಕೇಸರಿ ಬಾವುಟ ಕಂಡರೆ ಉರಿದು ಬೀಳುವ  ಕಾಂಗ್ರೆಸ್  ಸರ್ಕಾರ, ಮಂಡ್ಯ ಜಿಲ್ಲೆಗೆ ಬೆಂಕಿ ಇಟ್ಟು ಹಿಂದೂಗಳನ್ನು ಹತ್ತಿಕ್ಕಲು ಮಹಾ ಷಡ್ಯಂತ್ರವನ್ನೇ ಹೆಣೆದಿದೆ. ಆ ಕುತಂತ್ರದ ಭಾಗವಾಗಿಯೇ ಮುಖ್ಯಮಂತ್ರಿಗಳು ಸುಳ್ಳು ಸುದ್ದಿ ಹರಡಿ ದಿಕ್ಕು ತಪ್ಪಿಸುವ ಹೀನ ಕೃತ್ಯಕ್ಕೆ ಕೈ ಹಾಕಿರುವುದು ನಾಚಿಕೆಗೇಡು! ಎಂದು ಬಿಜೆಪಿ ಲೇವಡಿ ಮಾಡಿತ್ತು.

SCROLL FOR NEXT