ಮೈಸೂರು ಅಭಿವೃದ್ಧಿ ಪ್ರಾಧಿಕಾರ-ಮುಡಾದಿಂದ ನಿವೇಶನ ಹಂಚಿಕೆಯ ಹಗರಣ ಹೊರಬರುತ್ತಿದ್ದಂತೆ ರಾಜ್ಯ ಸರ್ಕಾರ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಲಕ್ಷ್ಮಿಕಾಂತ್ ಈ ಹಿಂದೆ ಮೈಸೂರು ಪಾಲಿಕೆ ಆಯುಕ್ತರಾಗಿದ್ದರು. ಈ ಮಧ್ಯೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರವಿದೆ. ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಸ್ ಸಿ, ಎಸ್ ಪಿ ಮತ್ತು ಟಿಎಸ್ ಪಿಯಡಿ ನಿಗದಿ ಮಾಡಿರುವ ಅನುದಾನವನ್ನು ಆಯಾ ವರ್ಷವೇ ವೆಚ್ಚ ಮಾಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿಂದು ನಡೆದ ರಾಜ್ಯ ಅನುಸೂಚಿತ ಜಾತಿಗಳು, ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಸಿಎಂ, ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ಎಸ್ ಸಿ ಎಸ್ ಪಿ, ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಈ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಆಯಾ ವರ್ಷವೇ ಶೇ. 100 ರಷ್ಟು ಖರ್ಚು ಮಾಡಬೇಕೆಂಬ ಕಾನೂನನ್ನು ಜಾರಿಗೆ ತರಲಾಗಿದ್ದು, ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಮಧ್ಯೆ ಎಸ್ ಸಿ, ಎಸ್ ಪಿ ಮತ್ತು ಟಿಎಸ್ ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ನಿರಂತರ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನಲ್ಲಿ ಹೆದ್ದಾರಿ ಪಕ್ಕ ಗುಡ್ಡ ಕುಸಿತವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕೆಲವೆಡೆ ಭೂ ಕುಸಿತವೂ ಉಂಟಾಗಿದೆ. ಈ ಮಧ್ಯೆ ಕೃಷ್ಣೆ, ತುಂಗೆ, ಕಾವೇರಿ ನದಿಗಳು ಮೈದುಂಬಿ ಹರಿಯುತ್ತಿವೆ.
ಶೃಂಗೇರಿಯ ಸ್ನಾನಘಟ್ಟ ಹಾಗೂ ಕಪ್ಪೆ ಶಂಕರ ದೇವಸ್ಥಾನದ ಮೆಟ್ಟಿಲುಗಳು ಸಂಪೂರ್ಣ ನೀರಿನಲ್ಲಿ ಮುಳುಗಿವೆ. ಕೊಡಗು, ಭಾಗಮಂಡಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿಯಾಗಿದ್ದು, ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಉಪ ಮೇಯರ್ ಮೋಹನ್ ರಾಜು ಸೇರಿ ಮೂವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಮೋಹನ್ ರಾಜು ನಗರದ ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಉಪ ಮೇಯರ್ ಮೋಹನ್ ರಾಜ್ ರಿಂದ 40 ಲಕ್ಷ ರೂಪಾಯಿ ಹಣ ಪಡೆದಿದ್ದರ ಬಗ್ಗೆ ವಿಚಾರಣೆ ವೇಳೆ ದರ್ಶನ್ ಅವರು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತ ಅವರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣದ ಆರೋಪಿ ಒಬ್ಬನಿಗೆ ಹಣಕಾಸಿನ ಸಹಾಯ ಮಾಡಿರುವ ಆರೋಪ ಇವರ ಮೇಲಿದೆ. ಬೆಂಗಳೂರಿನ ಪ್ರಭಾವಿ ಶಾಸಕನ ಕಾರು ಚಾಲಕ ಕಾರ್ತಿಕ್ ಪುರೋಹಿತ್ ಎಂಬಾತನಿಗೂ ನೋಟಿಸ್ ನೀಡಲಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿ ಪ್ರದೋಷ್ ಗೆ ಆಪ್ತನಾಗಿರುವ ಕಾರ್ತಿಕ್ ಪುರೋಹಿತ್ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿರುವ ರೌಡಿ ಅಭಿಮಾನಿಗಳ ಫ್ಯಾನ್ ಪೇಜ್ ಗಳಿಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಸೈಬರ್ ಕ್ರೈಂ ಪೊಲೀಸರ ಸಹಾಯದೊಂದಿಗೆ ಈಗಾಗಲೇ ಅಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಸೈಕಲ್ ರವಿ ಸೇರಿದಂತೆ ಹಲವರ ಹೆಸರಿನಲ್ಲಿ ಬಾಸ್ ಟ್ಯಾಗ್ ಲೈನ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್ ಗಳನ್ನು ತೆರೆಯಲಾಗುತ್ತಿದ್ದು ಗಮನಕ್ಕೆ ಬಂದಿತ್ತು.