ಹಾಸನ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರಣಾಂತಿಕ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ ಇದುವರೆಗೆ ಅತಿ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ. ಇದೀಗ ಹಾಸನ ಜಿಲ್ಲೆಯಲ್ಲಿ ಮತ್ತೋರ್ವ ಯುವತಿ ಬಲಿಯಾಗಿದ್ದಾಳೆ.
23 ವರ್ಷದ ಯುವತಿ ಸುಪ್ರೀತಾ ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾಳೆ, ಅರಸೀಕೆರೆ ತಾಲ್ಲೂಕಿನ ಮುದುಡಿ ತಾಂಡಾದ ನಿವಾಸಿ ಸುಪ್ರೀತಾ ತೀವ್ರ ಜ್ವರದಿಂದ ಬಳಲುತ್ತಿದ್ದರು. ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಹು ಅಂಗಾಂಗ ವೈಫಲ್ಯಗೊಂಡಿದ್ದರಿಂದ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಮೂವರು ಮಕ್ಕಳು ಸೇರಿದಂತೆ 7 ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.
ಗದಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ: ಗದಗ ತಾಲೂಕಿನ ಶಿರುಂಜ ಗ್ರಾಮದ ಚಿರಾಯಿ ಹೊಸಮನಿ ಎಂಬ 5 ವರ್ಷದ ಬಾಲಕ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಚಿರಾಯಿ ಹೊಸಮನಿಯನ್ನು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಚಿರಾಯಿ ಹೊಸಮನಿ ಮೃತಪಟ್ಟಿದ್ದಾನೆ.
ದಿನೇ ದಿನೇ ರಾಜ್ಯಾದ್ಯಂತ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಡೆಂಗ್ಯೂ ಹರಡುವ ಪ್ರದೇಶಗಳಲ್ಲಿ ಲಾರ್ವಾ ಸರ್ವೆಯನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಲಾರ್ವಾ ನಾಶಕ್ಕೆ ನೀರಿನ ಟ್ಯಾಂಕ್ ಗಳಿಗೆ ಗಪ್ಪಿ, ಗಾಂಬೂಸಿಯಾ ಮೀನುಗಳನ್ನು ಬಿಡಲಾಗುತ್ತಿದೆ. ಕೆರೆಗಳು, ಮನೆ ಮನೆಗಳಲ್ಲಿ ತೆರೆದ ನೀರಿನ ಟ್ಯಾಂಕ್ಗಳಿಗೂ ಮೀನು ಬಿಟ್ಟು ನೀರು ಶುದ್ಧೀಕರಣ ಮಾಡಲು ನೋಡಲಾಗುತ್ತಿದೆ. ಡೆಂಗ್ಯೂ ತಡೆಗೆ ಆರೋಗ್ಯ ಇಲಾಖೆ ಮುಂದಾಗಿದೆ.