ಮೈಸೂರು: ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮುಡಾ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು ಎಂದು ಬಿಜೆಪಿ ಶಾಸಕ, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮುಡಾ ಭ್ರಷ್ಟಾಚಾರದ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮುಡಾ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಅಲ್ಲದೆ, ಆಯುಕ್ತರನ್ನು ಬದಲಾಯಿಸುವಂತೆ ಅಂದಿನ ಸರಕಾರಕ್ಕೆ ಹೇಳಿದ್ದೆ. ಆದರೆ, ಜಾತಿಯ ಪ್ರಭಾವದಿಂದ ಅವರು ಉಳಿಯುವ ರೀತಿ ಆಯಿತು ಎಂದು ಹೇಳಿದರು.
ಆಯುಕ್ತರು ಸಭೆ ಮಾಡದೆಯೇ ನಿವೇಶನಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ಕೊಡಬೇಕು. ಇದು ಯಾವ ರೂಲ್ಸ್ ಗಳನ್ನು ಅಂದಿನ ಆಯುಕ್ತರು ಫಾಲೋ ಮಾಡಲಿಲ್ಲ. ಹೀಗಾಗಿ, ಆಯುಕ್ತರನ್ನ ಬದಲಾಯಿಸುವಂತೆ ಅಂದಿನ ಸರಕಾರಕ್ಕೆ ಹೇಳಿದ್ದೆ. ಆದರೆ, ಜಾತಿಯ ಪ್ರಭಾವದಿಂದ ಅವರು ಉಳಿಯುವ ರೀತಿ ಆಯಿತು. ಅಂದೇ ಸರಿಯಾದ ಕ್ರಮ ಆಗಿದ್ದರೆ ಇವತ್ತು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ ಎಂದು ತಿಳಿಸಿದರು.
ಮುಡಾದ ಪ್ರತಿ ಮೀಟಿಂಗ್ ನಲ್ಲಿ ಶಾಸಕರ ಫೈಲ್ ಗಳೇ ಇರುತ್ತಿದ್ದವು. ಆದರೆ, ಶಾಸಕರ ಹೆಸರಿನ ಫೈಲ್ ಗಳು ಚರ್ಚೆಯಾಗದೆ ಪಾಸ್ ಆಗುತ್ತಿದ್ದವು. ಮುಡಾ ಸಭೆಯ ಬಹುತೇಕ ಸಬ್ಜೆಕ್ಟ್ ಗಳು ಶಾಸಕರಿಗಳಿಗೆ ಸೇರಿದ್ದವು. ಇಲ್ಲಿ ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನ ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರಗಳು ಲಾಭಿ ಮಾಡುತ್ತಾರೆ. ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ ಆದರೆ ಇಲ್ಲಿ ಆಗುತ್ತಿರುವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹಿಸಿದರು.
ಇನ್ನು ಇದೇ ವೇಳೆ ತಮ್ಮ ಹೆಸರಿನ ಮೇಲೆ ಮುಡಾದಲ್ಲಿ ಒಂದೇ ಒಂದು ಸೈಟ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು.
ನನ್ನ ಹೆಸರಿನಲ್ಲಿ ಅಥವಾ ನನ್ನ ಬೇನಾಮಿ ಹೆಸರಿನಲ್ಲಿ ಮುಡಾ ಒಂದೇ ಒಂದು ನಿವೇಶನ ಇದ್ದರೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಸ್ಪಷ್ಟಪಡಿಸಿದರು.