ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಮೊರಾರ್ಜಿ ದೇಸಾಯಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದ ಒಂದು ದಿನದ ನಂತರ, ಪೊಲೀಸರು ಮತ್ತು ವೈದ್ಯಕೀಯ ತಂಡವು ಮೃತರ ಶವವನ್ನು ಹೊರತೆಗೆದು ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿತು.
ಜುಲೈ 2 ರಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಕಟ್ಟಿ ಗ್ರಾಮದ ತನ್ನ ನಿವಾಸದಲ್ಲಿ 14 ವರ್ಷದ ಅರ್ಚನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಬರೆದ ಡೆತ್ ನೋಟ್‌ನಲ್ಲಿ, ತನ್ನ ಸಹಪಾಠಿ ಮತ್ತು ಆಕೆಯ ತಾಯಿ ವಿರುದ್ಧಕಿರುಕುಳದ ಆರೋಪ ಮಾಡಿದ್ದಳು.
ಆದರೆ, ಆಕೆಯ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದೆ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದರು. ಅದಾದ ನಂತರ ಕೆಲವು ಗ್ರಾಮಸ್ಥರ ಬೆಂಬಲದೊಂದಿಗೆ ಬಾಲಕಿಯ ಪೋಷಕರು ಆರೋಪಿ ವಿದ್ಯಾರ್ಥಿನಿ ಜೋಯಾ ಪೋಷಕರಿಂದ 5 ಲಕ್ಷ ರೂಪಾಯಿ ಪರಿಹಾರವನ್ನು ಕೋರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಚನಾ ಪೋಷಕರಿಗೆ 1 ಲಕ್ಷ ಪರಿಹಾರ ನೀಡುವಂತೆ ಶಾಲಾ ಆಡಳಿತ ಮಂಡಳಿ ಮನವರಿಕೆ ಮಾಡಿಕೊಟ್ಟಿತ್ತು ಎನ್ನಲಾಗಿದೆ. ಗ್ರಾಮಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಂತರ ಸುದ್ದಿ ಹಬ್ಬಿತ್ತು.
ಡೆತ್ ನೋಟ್ ಸಿಕ್ಕಿದ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತೇವೆ. ಸ್ಮಶಾನದಲ್ಲಿ ಶವಪರೀಕ್ಷೆ ಪೂರ್ಣಗೊಂಡ ನಂತರ ಹೊರತೆಗೆಯಲಾದ ದೇಹವನ್ನು ಕುಟುಂಬಕ್ಕೆ ಮರುಸಂಸ್ಕಾರಕ್ಕಾಗಿ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶವ ಪರೀಕ್ಷೆ ನಡೆಸಿದ ಸ್ಮಶಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಹಾವೇರಿ ಜಿಲ್ಲೆಯ ಹಿರಿಯ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕಿಯ ಶವವನ್ನು ಹೊರತೆಗೆಯಲಾಯಿತು.