ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ರಾಜ್ಯಪಾಲರ ಬಳಿ ಅನುಮತಿ ಕೇಳುವಂತೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ವಕೀಲರಿಗೆ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯದಲ್ಲಿನ ಹಗರಣಗಳ ವಿಷಯವನ್ನು ರಾಜ್ಯಪಾಲರ ಬಳಿ ಕೊಂಡೊಯ್ಯಲು ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೇಳುವಂತೆ ರಾಜ್ಯದ ಅಡ್ವೊಕೇಟ್ ಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
“ಈ ರಾಜ್ಯ ಸರ್ಕಾರದ ಹಲವಾರು ಹಗರಣಗಳು ಒಂದರ ಹಿಂದೆ ಒಂದರಂತೆ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹೊರಗೆ ಕರ್ನಾಟಕದ ಈ ಆಡಳಿತದ ಬಗ್ಗೆ ನಕಾರಾತ್ಮಕ ಭಾವನೆ ಇದೆ, ಇದು ನೋವಿನ ಸಂಗತಿಯಾಗಿದೆ,'' ಎಂದು ಜೆಡಿಎಸ್ ಮುಖಂಡರೂ ಆಗಿರುವ ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಗರಣಗಳ ವಿಷಯವಾಗಿ ಕೋರ್ಟ್ ಮೊರೆ ಹೋಗಿ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಕುಮಾರಸ್ವಾಮಿ ಹೇಳಿದ್ದಾರೆ. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮಕ್ಕೆ ವಕೀಲರು ರಾಜ್ಯಪಾಲರಿಂದ ಒಪ್ಪಿಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಂದಿನ ಬಿಜೆಪಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪ ಅವರನ್ನು ರಾಜೀನಾಮೆ ಕೇಳಿತ್ತು ಮತ್ತು 2011 ರಲ್ಲಿ ಯಡಿಯೂರಪ್ಪ ಜೈಲು ಸೇರಿದ್ದರು.
ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಮಾರ್ಚ್‌ನಲ್ಲಿ ಮಂಡಳಿಯಿಂದ 94 ಕೋಟಿ ರೂ.ಗಳನ್ನು ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
"ಒಂದು ವೇಳೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಮತ್ತು ಡೆತ್ ನೋಟ್ ಇಲ್ಲದಿದ್ದರೆ ಕಾಂಗ್ರೆಸ್ ಸರ್ಕಾರ ಈ ಹಗರಣದ ಬಗ್ಗೆ ಏನು ಮಾಡುತ್ತಿತ್ತು?" ಹೆಚ್ ಡಿ ಕುಮಾರಸ್ವಾಮಿ ಕೇಳಿದ್ದಾರೆ.
ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಯನ್ನು ಕೇವಲ ಆತ್ಮಹತ್ಯೆ ಎಂದು ಪರಿಗಣಿಸುತ್ತೀರಾ ಸಿಎಂ ಸಿದ್ದರಾಮಯ್ಯ? ಸರ್ಕಾರದ ಹಣದಾಹದ ಹಿನ್ನೆಲೆಯಲ್ಲಿ ನಡೆದ ಕೊಲೆಯಲ್ಲವೇ? ಆಡಳಿತ ದಕ್ಷವಾಗಿದ್ದರೆ ಈ ಘಟನೆ ನಡೆಯುತ್ತಿತ್ತೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
“ಸರ್ಕಾರದ ಅಕ್ರಮ ಮತ್ತು ಲೂಟಿಯಿಂದ ಅಧಿಕಾರಿ ಚಂದ್ರಶೇಖರನ್ ತಮ್ಮ ಜೀವನವನ್ನು ಕೊನೆಗೊಳಿಸಿದರು. ಆತ್ಮಹತ್ಯೆ ನಡೆದು 40 ದಿನಗಳು ಕಳೆದರೂ ಪ್ರಕರಣದ ತನಿಖೆಗೆ ರಚಿಸಿರುವ ಎಸ್‌ಐಟಿಯು ಸಂಬಂಧಪಟ್ಟ ಸಚಿವರು ಮತ್ತು ಶಾಸಕರನ್ನು ಮುಟ್ಟಲು ಮುಂದಾಗಲಿಲ್ಲ. ಪ್ರಕರಣದಲ್ಲಿ ಅವರನ್ನು ಬಂಧಿಸಲು ED ಘಟನಾ ಸ್ಥಳಕ್ಕೆ ಬರಬೇಕಾಯ್ತು,'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಸಮುದಾಯವನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ ಡಿ ಕುಮಾರಸ್ವಾಮಿ, ಸಮುದಾಯದ ಹೆಸರಿನಲ್ಲಿ ಹಿಂದುಳಿದ ವರ್ಗಗಳ ರಕ್ಷಣೆಗಾಗಿ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. "ಜನರು ನಿಮಗೆ ಅಧಿಕಾರ ನೀಡಿದ್ದಾರೆ, ಕೆಟ್ಟ ಹೆಸರು ತೆಗೆದುಕೊಳ್ಳಬೇಡಿ ಮತ್ತು ನಿಮ್ಮ ರಾಜಕೀಯ ಜೀವನದ ಕೊನೆಯ ಹಂತಕ್ಕೆ ಹೋಗಬೇಡಿ, ಗೌರವಾನ್ವಿತ ಆಡಳಿತ ನೀಡಿ ಎಂದು ಸಿಎಂ ಗೆ ಸಲಹೆ ನೀಡಿದ್ದಾರೆ.
ನೀವು ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿದ್ದೀರಿ, ಆದರೆ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಕೆಟ್ಟ ಹೆಸರು ತರುವ ಆಡಳಿತ ನಡೆಸುತ್ತಿದ್ದೀರಿ,’’ ಎಂದು ಸಿದ್ದರಾಮಯ್ಯಗೆ ಹೆಚ್ ಡಿ ಕೆ ತಿರುಗೇಟು ನೀಡಿದ್ದಾರೆ.
ಮುಡಾ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಬೇಡಿಕೆಯಂತೆ ಸರಕಾರ 62 ಕೋಟಿ ರೂ.ಪರಿಹಾರ ಏಕೆ ನೀಡಬೇಕೆಂದು ಆಕ್ರೋಶದಿಂದ ಪ್ರಶ್ನಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದ ಸಿದ್ದರಾಮಯ್ಯ, ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದವರು ಮತ್ತು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದರಿಂದ ಅಸೂಯೆಯಿಂದ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಹೇಳಿದ್ದರು.
ಮುಡಾ ಸ್ವಾಧೀನಪಡಿಸಿಕೊಂಡಿರುವ 3.16 ಎಕರೆ ಭೂಮಿಗೆ ಬದಲಾಗಿ ತಮ್ಮ ಪತ್ನಿಗೆ ಪರ್ಯಾಯ ನಿವೇಶನ ನೀಡಲಾಗಿತ್ತು. ಆದರೆ ಅದನ್ನು ಈಗ ಬೇಡ ಎಂದಿರುವ ಸಿಎಂ, ನಿಯಮಾನುಸಾರ 62 ಕೋಟಿ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, "ಇದು ಯಾರ ಜಮೀನು? ಇದು ಸಿಎಂ ಅಥವಾ ಅವರ ಪತ್ನಿಯ ಸಹೋದರನ ಪೂರ್ವಜರ ಆಸ್ತಿಯೇ?" ಇದು ನಿಜವಾಗಿ ಅವರಿಗೆ ಸೇರಿಲ್ಲ, ಇದು ಮುಡಾ ಆಸ್ತಿಯಾಗಿದೆ, ಏಕೆಂದರೆ ಇದು ಮೂಲ ಮಾಲೀಕರಿಗೆ 3,24,000 ರೂ. ಪಾವತಿಸಿ 1997 ರಲ್ಲಿ ಅಂತಿಮ ಅಧಿಸೂಚನೆಯ ಸಮಯದಲ್ಲಿ ಮುಡಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು ಎಂದು ಹೇಳಿದ್ದಾರೆ.
“ಇದು ಅವರ ತಂದೆಯ ಆಸ್ತಿಯೇ? ಸಿಎಂ ಸಿದ್ದರಾಮಯ್ಯ ವಾರಸುದಾರರಾ? ಅದು ಯಾರ ಜಮೀನಾಗಿತ್ತು? ಇದು ನಿಜವಾಗಿಯೂ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಸಹೋದರನಿಗೆ ಸೇರಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
“ಸಿಎಂ ಸಿದ್ದರಾಮಯ್ಯ ಅವರು ಜಮೀನಿನ ಮಾಲೀಕತ್ವವನ್ನು ಪಡೆದುಕೊಳ್ಳುವ ಮೊದಲು, ಆ ಆಸ್ತಿಯನ್ನು ಈಗಾಗಲೇ ಮುಡಾ ಖರೀದಿಸಿದೆ. ಮುಡಾ ಭೂ ಹಗರಣ ಗಂಭೀರ ವಿಷಯವಾಗಿದೆ. ಅಧಿಕಾರ ದುರುಪಯೋಗ ಮತ್ತು ಹಗರಣದಲ್ಲಿ ಸಿಎಂ ಕುಟುಂಬದ ಕೈವಾಡದ ಬಗ್ಗೆ ಪ್ರಶ್ನೆಗಳೆದ್ದಿವೆ,'' ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
2004 ರಲ್ಲಿ, ಮಲ್ಲಿಕಾರ್ಜುನ ಸ್ವಾಮಿ (ಸಿದ್ದರಾಮಯ್ಯನವರ ಪತ್ನಿಯ ಸಹೋದರ) 3.16 ಎಕರೆ ಭೂಮಿಯನ್ನು ಖರೀದಿಸಿದ್ದರು ಮತ್ತು ನಂತರ ಅದನ್ನು ತಮ್ಮ ಸಹೋದರಿ ಪಾರ್ವತಿಗೆ ಉಡುಗೊರೆಯಾಗಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. 2013ರ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಅವರು ಈ ಜಮೀನು ನಮೂದಿಸಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ, 2014ರಲ್ಲಿ ಸಿಎಂ ಕುಟುಂಬ ಲೇಔಟ್ ಮಾಡಲು ಮುಡಾದಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಮುಡಾಕ್ಕೆ ಪತ್ರ ಬರೆದು, 3.16 ಎಕರೆ ಕಳೆದುಕೊಂಡಿದ್ದಕ್ಕೆ ಬದಲಿಗೆ ಪರ್ಯಾಯ ನಿವೇಶನಗಳನ್ನು ಕೋರಿದ್ದರು ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ ಭೂಸ್ವಾಧೀನಪಡಿಸಿಕೊಂಡಿರುವ ಭೂಮಿ ಮೂರರಿಂದ ನಾಲ್ಕು ಎಕರೆಯಾಗಿದ್ದರೆ, ಸ್ವಾಧೀನಪಡಿಸಿಕೊಂಡ ಭೂಮಿಗೆ ಬದಲಾಗಿ ಎರಡು ನಿವೇಶನಗಳನ್ನು ಮಾತ್ರ ನೀಡಬೇಕು ಮತ್ತು ಅದನ್ನು ಅದೇ ಪ್ರದೇಶದಲ್ಲಿ ನೀಡಬೇಕು ಮತ್ತು ಬೇರೆಡೆ ನೀಡಬಾರದು ಎಂದು ಕುಮಾರಸ್ವಾಮಿ ಹೇಳಿದರು. 2022ರಲ್ಲಿ ನಿಯಮ ಉಲ್ಲಂಘಿಸಿ ಸಿದ್ದರಾಮಯ್ಯ ಅವರ ಪತ್ನಿಗೆ ಮೈಸೂರಿನ ವಿಜಯನಗರ ಪ್ರದೇಶದಲ್ಲಿ ಮುಡಾದಿಂದ 14 ಪರ್ಯಾಯ ನಿವೇಶನ ನೀಡಲಾಗಿದೆ.