ಇಂದಿನ ಪ್ರಮುಖ ಸುದ್ದಿಗಳು (ಸಂಗ್ರಹ ಚಿತ್ರ) online desk
ರಾಜ್ಯ

ಗುಡ್ಡ ಕುಸಿತ 10 ಮಂದಿ ಸಾವು; 7 ನೇ ವೇತನ ಆಯೋಗ ಶಿಫಾರಸು ಆ.1ರಿಂದ ಜಾರಿ; ಸದನದಲ್ಲಿ ರೇವಣ್ಣ ಕಣ್ಣೀರು; ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಜಾಮೀನು- ಇವು ಇಂದಿನ ಪ್ರಮುಖ ಸುದ್ದಿಗಳು 16-07-2024

ಗುಡ್ಡ ಕುಸಿತ 10 ಮಂದಿ ಸಾವು

ಕಾರವಾರ-ಕುಮಟಾ ರಸ್ತೆಯ ಅಂಕೋಲಾ ಸಮೀಪದ ಶಿರೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಭೂಕುಸಿತ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಸಂಪೂರ್ಣ ಗುಡ್ಡ ಅಂಗಡಿಯ ಮೇಲೆ ಕುಸಿದು ಬಿದ್ದಿದ್ದು, ಪರಿಣಾಮ ಸ್ಥಳದಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಹಾಗೂ ಹಲವು ವಾಹನಗಳು ಕೂಡ ಮಣ್ಣಿನಡಿ ಸಿಲುಕಿಕೊಂಡಿದೆ. ಮೃತಪಟ್ಟ 10 ಮಂದಿಯ ಪೈಕಿ ಐವರು ಒಂದೇ ಕುಟುಂಬದ ಸದಸ್ಯರಿದ್ದಾರೆಂದು ಹೇಳಲಾಗಿದ್ದು, ಇವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಕ್ಯಾಂಟೀನ್ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ವೊಂದು ಗುಡ್ಡ ಕುಸಿತದ ರಭಸಕ್ಕೆ ಗಂಗವಳ್ಳಿ ನದಿಗೆ ಕೊಚ್ಚಿಹೋಗಿದೆ. ಇದರಿಂದ ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

7 ನೇ ವೇತನ ಆಯೋಗ ಶಿಫಾರಸು ಆ.1 ರಿಂದ ಜಾರಿ

ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ 7ನೇ ವೇತನ ಆಯೋಗದ ಶಿಫಾರಸು ಆಗಸ್ಟ್ 1ರಂದು ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿ ಘೋಷಿಸಿದ್ದಾರೆ. ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿ ಭತ್ಯೆ ಮತ್ತು ಶೇ.27.50 ರಷ್ಟು ಫಿಟ್‌ಮೆಂಟ್ ಸೇರಿಸುವ ಮೂಲಕ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುತ್ತದೆ. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗಲಿದೆ.

ರಸ್ತೆ ಅಪಘಾತ 4 ಮಂದಿ ಸಾವು

ನೈಸ್ ರಸ್ತೆಯಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಗೋವಾ ಪ್ರವಾಸಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ನೈಸ್ ರಸ್ತೆಯಲ್ಲಿ ಭೀಕರವಾಗಿ ಕಾರು ಅಪಘಾತಕ್ಕೀಡಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗ್ರಾಮಪಂಚಾಯಿತಿ ಸದಸ್ಯ ಸೇರಿ ಮೂವರು ಸಾವನ್ನಪ್ಪಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ವಿನೋದ್, ಆತನ ಸ್ನೇಹಿತರು ತೆರಳುತ್ತಿದ್ದರು, ಈ ವೇಳೆ ನೈಸ್ ರಸ್ತೆಯ ಸೋಪುರ ಸರ್ಕಲ್ ಬಳಿ ಕಾರಿನ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡ ವಿನೋದ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿದಾಗ ಏರ್ ಬ್ಯಾಗ್ ತೆರೆದುಕೊಂಡಿಲ್ಲ. ಮತ್ತೊಂದು ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿರುವ ಬಸಾಪುರ ಸೇತುವೆ ಬಳಿ ನಡೆದಿದೆ. ಕಾರ್ಖಾನೆಗೆ ನೌಕರರನ್ನು ಒಯ್ಯುತ್ತಿದ್ದ ಮಿನಿ ಬಸ್, ರಸ್ತೆ ಬದಿ ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮತಪಟ್ಟು, ಐವರು ನೌಕರರು ಗಾಯಗೊಂಡಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್‌ಎಲ್ ಸುರೇಶ್ ಅವರಿಗೆ ಜಾಮೀನು ನೀಡಿದೆ. ಜಾಮೀನು ಮಂಜೂರು ವೇಳೆ ಕೋರ್ಟ್‌ ಹಲವು ಷರತ್ತು ವಿಧಿಸಿದ್ದು ಈ ಷರತ್ತು ಪೂರ್ಣಗೊಂಡ ಬಳಿಕ ಇಂದು ಸಂಜೆ ಅಥವಾ ನಾಳೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಹನ್ನೊಂದನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು.

ಸದನದಲ್ಲಿ ರೇವಣ್ಣ ಕಣ್ಣೀರು

ತಮ್ಮ ಕುಟುಂಬದ ವಿಚಾರವೆತ್ತಿದ್ದಕ್ಕೆ ಜೆಡಿಎಸ್ ಶಾಸಕ ಮಾಜಿ ಸಚಿವ ಎಚ್ ರೇವಣ್ಣ ಕೆಂಡಾಮಂಡಲರಾಗಿ ಕಣ್ಣೀರು ಹಾಕಿದ ಪ್ರಸಂಗಕ್ಕೆ ಇಂದು ವಿಧಾನಸಭೆ ಕಲಾಪದಲ್ಲಿ ಸಾಕ್ಷಿಯಾಯಿತು. ಸದನದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಾಲ್ಮೀಕಿ ಹಗರಣದ ಬಗ್ಗೆ ಎಸ್ಐಟಿ ಮಾಡಿದ್ದಾರೆ. ಆದರೆ ಎಸ್ಐಟಿ ಏನು‌ ಮಾಡುತ್ತಿದೆ. ಹೆಚ್‌.ಡಿ ರೇವಣ್ಣನವರನ್ನ ಕೂಡಲೇ ಅರೆಸ್ಟ್ ಮಾಡಿದರು. ಆದ್ರೆ ಈ ಪ್ರಕರಣದಲ್ಲಿ ನಿಧಾನ ಏಕೆ? ರೇವಣ್ಣಗೆ ಒಂದು ಕಾನೂನು ಬೇರೆಯವರಿಗೆ ಒಂದಾ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಕಾಂಗ್ರೆಸ್‌ ನಾಯಕರು ರೇವಣ್ಣ ಪ್ರಕರಣ ಸಣ್ಣದಲ್ಲ. ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆ. ಕರ್ನಾಟಕದ ಮಾನ ಹೋಗಿದೆ ಎಂದರು. ಈ ವೇಳೆ ರೇವಣ್ಣ ಎದ್ದು ನಿಂತು ಸಭಾಧ್ಯಕ್ಷರೇ ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ. ಆದರೆ ಯಾರೋ ಹೆಣ್ಣು ಮಗಳಿಂದ ದೂರು ಬರೆಸುತ್ತಾರೆ. ಡಿಜಿ ಆಫೀಸ್‌ನಲ್ಲಿ ಕಂಪ್ಲೇಂಟ್ ಬರೆಸುತ್ತಾರೆ. ಅವನೇನು ಡಿಜಿ‌ ಆಗೋಕೆ‌ ಲಾಯಕ್ ಇದ್ದಾರಾ? ಎಂದು ಆಕ್ರೋಶದಲ್ಲಿ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT