ಕರ್ನಾಟಕ ಹೈಕೋರ್ಟ್ 
ರಾಜ್ಯ

ವೈದ್ಯಕೀಯ ಸೀಟು ವಂಚನೆ: ದಲ್ಲಾಳಿಗಳ ವಂಚನೆ ಘೋರ ಕೃತ್ಯ, ಈ ಅಪರಾಧ ತಡೆಯಬೇಕು ಎಂದ ಹೈಕೋರ್ಟ್‌

ದಲ್ಲಾಳಿಗಳು ವೈದ್ಯಕೀಟು ಸೀಟು ಕೊಡಿಸುವುದಾಗಿ ಜನರಿಗೆ ನಂಬಿಸಿ ಮೋಸ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪೀಠವು ಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ನುಡಿಯಿತು.

ಬೆಂಗಳೂರು: ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ಅಮಾಯಕರನ್ನು ದಲ್ಲಾಳಿಗಳು ನಂಬಿಸಿ ಕೋಟ್ಯಂತರ ಹಣ ಪಡೆದು ವಂಚಿಸುತ್ತಿರುವುದು ಸಮಾಜದಲ್ಲಿ ಅತಿಘೋರ ಘಟನೆಯಾಗಿದ್ದು, ಇಂತಹ ಅಪರಾಧಗಳನ್ನು ತಡೆಯಬೇಕಿದೆ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಬೆಂಗಳೂರಿನ ವಿದ್ಯಾರ್ಥಿಯೊಬ್ಬರಿಗೆ ಮ್ಯಾನೇಜ್‌ಮೆಂಟ್‌ (ಆಡಳಿತ ಮಂಡಳಿ) ಕೋಟಾದಡಿ ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ತಿಳಿಸಿ ರೂ.2.12 ಕೋಟಿ ಪಡೆದು ವಂಚಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ವಿ ವಿ ಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಪಿಳ್ಳಣ್ಣ ಗಾರ್ಡನ್‌ ನಿವಾಸಿ ಎಂ ಸಿ ವಿರೂಪಾಕ್ಷಪ್ಪ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠದ ಮುಂದೆ ಸೋಮವಾರ ವಿಚಾರಣೆ ಬಂದಿತ್ತು.

ವಿಚಾರಣೆ ವೇಳೆ ದಲ್ಲಾಳಿಗಳು ವೈದ್ಯಕೀಟು ಸೀಟು ಕೊಡಿಸುವುದಾಗಿ ಜನರಿಗೆ ನಂಬಿಸಿ ಮೋಸ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪೀಠವು ಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ನುಡಿಯಿತು. ಇದರಿಂದ ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.

ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ತಿಳಿಸಿ ನಗರದ ವಿದ್ಯಾರ್ಥಿ ಮೋಹಿತ್‌ ರೆಡ್ಡಿ ಹಾಗೂ ಅವರ ತಂದೆಯಿಂದ ರೂ.2.12 ಕೋಟಿ ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಮಂಜಪ್ಪ ಹಾಗೂ ಅರ್ಜಿದಾರ ವಿರೂಪಾಕ್ಷಪ್ಪ ಸೇರಿದಂತೆ ಆರು ಮಂದಿ ವಿರುದ್ಧ ವಿ ವಿ ಪುರ ಪೊಲೀಸ್‌ ಠಾಣೆಯಲ್ಲಿ 2023ರ ನವೆಂಬರ್‌ 21ರಂದು ಎಫ್‌ಐಆರ್‌ ದಾಖಲಾಗಿತ್ತು.

ಪ್ರಕರಣದಲ್ಲಿ ದಲ್ಲಾಳಿಯಾದ ಮಂಜಪ್ಪ ಮೊದಲನೇ ಆರೋಪಿಯಾದರೆ, ವಿರೂಪಾಕ್ಷ ಎರಡನೇ ಆರೋಪಿಯಾಗಿದ್ದಾರೆ. ಇದರಿಂದ ತನ್ನ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿಯನ್ನು ಆಕ್ಷೇಪಿಸಿದ ಸರ್ಕಾರಿ ವಕೀಲರು, ಎಫ್‌ಐಆರ್‌ ರದ್ದುಗೊಳಿಸಲು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಮೇಲಿನ ಆರೋಪ ಗಂಭೀರವಾಗಿದ್ದು, ಅವರ ಮನವಿ ಪುರಸ್ಕರಿಸಬಾರದು ಎಂದು ಕೋರಿದರು.

ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ಎಫ್‌ಐಆರ್ ರದ್ದುಗೊಳಿಸಲು ನೀವು ದಲ್ಲಾಳಿಗೆ ಮನವಿ ಮಾಡಿ ಎಂದು ಅರ್ಜಿದಾರ ಪರ ವಕೀಲರಿಗೆ ತೀಕ್ಷ್ಣವಾಗಿ ಸೂಚಿಸಿದರು.

ಅರ್ಜಿದಾರರ ಪರ ವಕೀಲರು ಉತ್ತರಿಸಿ, ಪ್ರಕರಣದಲ್ಲಿ ಅರ್ಜಿದಾರ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣದ ಅಂಶಗಳನ್ನು ಓದಿದರೆ, ದೂರುದಾರರನ್ನು ಮೊದಲನೆ ಆರೋಪಿಗೆ ಪರಿಚಯ ಮಾಡಿಕೊಟ್ಟ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಅವರ ಪಾತ್ರ ಅಷ್ಟಕ್ಕೆ ಸೀಮಿತವಾಗಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.

ಈ ವಾದ ಒಪ್ಪದ ನ್ಯಾಯಮೂರ್ತಿಗಳು, ನೀವು ಸಹ ಆರೋಪಿಯೇ. ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ಅಮಾಯಕರಿಗೆ ನಂಬಿಸಿ ಒಂದೂವರೆ, ಎರಡು ಕೋಟಿ ಪಡೆದು ವಂಚನೆ ಮಾಡಿದ್ದೀರ. ಸೀಟು ಆಕಾಂಕ್ಷಿಗಳನ್ನು ಏಕೆ ನೀವು ದಲ್ಲಾಳಿಗೆ ಪರಿಚಯ ಮಾಡಿಕೊಟ್ಟಿರಿ? ದಲ್ಲಾಳಿಗಳ ಮೂಲಕ ವೈದ್ಯಕೀಯ ಸೀಟು ಕೊಡಿಸುವ ವ್ಯವಹಾರವೇ ಇಂದು ಸಮಾಜದಲ್ಲಿ ಅತಿಘೋರವಾಗಿ ಮಾರ್ಪಟ್ಟಿದೆ ಎಂದು ಚಾಟಿ ಬೀಸಿದರು.

ಅದಕ್ಕೆ ಉತ್ತರಿಸಿದ ಅರ್ಜಿದಾರ ಪರ ವಕೀಲರು, ಮೊದಲ ಆರೋಪಿಗೆ ದೂರುದಾರರನ್ನು ಪರಿಚಯ ಮಾಡಿಕೊಟ್ಟಿದ್ದರು ಬಿಟ್ಟರೆ ಮತ್ಯಾವುದೇ ಆರೋಪ ಅರ್ಜಿದಾರರ ಮೇಲಿಲ್ಲ. ಅದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಕೋರಿದರು.

ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಅರ್ಜಿದಾರನ ಯಾವುದೇ ಸಣ್ಣ ಪಾತ್ರ ಇರುವುದು ಕಂಡುಬಂದರೂ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಸಮಾಜದಲ್ಲಿ ಸ್ವಲ್ಪವಾದರೂ ಬದಲಾವಣೆ ಆಗಬೇಕು. ವೈದ್ಯಕೀಯ ಸೀಟು ಕೊಡಿಸುವುದಾಗಿ ತಿಳಿಸಿ ಒಂದೂವರೆ, ಎರಡು ಕೋಟಿ ಪಡೆಯೋದೆಲ್ಲಾ ಏನ್ರಿ? ನೀವು ದಲ್ಲಾಳಿಯನ್ನು ಪರಿಚಯ ಮಾಡಿಸಿಕೊಟ್ಟಿರುವುದು ನಿಜವಲ್ಲವೇ? ಹಾಗಾದರೆ ನಿಮಗೆ ದಲ್ಲಾಳಿ ಗೊತ್ತು ಎಂದರ್ಥವಲ್ಲವೇ? ಅದರಲ್ಲಿ ಯಾವುದೇ ಸಂದೇಹ ಇಲ್ಲ ಬಿಡಿ. ಮತ್ತೇನು ಇದೆ ಪ್ರಕರಣದಲ್ಲಿ. ಇಂತಹ ಘಟನೆಗಳು ನಡೆಯಬಾರದು ಎಂದು ತಿಳಿಸಿ, ಅರ್ಜಿ ವಜಾಗೊಳಿಸಲು ಮುಂದಾದರು.

ಇದರಿಂದ ಅರ್ಜಿದಾರ ಪರ ವಕೀಲರು, ಅರ್ಜಿ ಹಿಂಪಡೆಯಲಾಗುವುದು. ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾದ ಸಂದರ್ಭದಲ್ಲಿ ಆರೋಪಗಳನ್ನು ಕೈ ಬಿಡಲು ಕೋರಿ ಅರ್ಜಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿರಿಸಬೇಕು ಎಂದು ಕೋರಿದರು.

ಅದಕ್ಕೆ ಒಪ್ಪಿದ ಪೀಠವು ಅರ್ಜಿ ಹಿಂಪಡೆಯಲು ಅನುಮತಿ ನೀಡಿತು. ಜೊತೆಗೆ, ಪ್ರಕರಣ ಕುರಿತು ಪೊಲೀಸರು ಅರ್ಜಿದಾರರ ವಿರುದ್ಧ ಅಂತಿಮ ವರದಿ ಸಲ್ಲಿಸಿದರೆ, ಅಂತಹ ಸಂದರ್ಭದಲ್ಲಿ ಅರ್ಜಿದಾರರು ಸಕ್ಷಮ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT