ಗಂಗಾವತಿ: ರೈಲ್ವೆ ಟ್ರ್ಯಾಕ್ ಮೇಲೆ ಮದ್ಯಸೇವನೆ ಮಾಡಿ ಮಲಗಿದ್ದ ಮೂವರು ಯುವಕರ ಮೇಲೆ ರೈಲು ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಸಾವನ್ನಪ್ಪಿದ ಘಟನೆ ಇಲ್ಲಿನ ರೈಲ್ವೆ ಸ್ಟೇಷನ್ ಸಮೀಪ ಗುರುವಾರ ತಡರಾತ್ರಿ ನಡೆದಿದೆ. ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮ ಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್ನ ವೆಂಕಟ ಭೀಮರಾಯ ಮಂಗಳೂರು (20) ಮೃತಪಟ್ಟಿದ್ದಾರೆ.
ರೈಲ್ವೆ ಹಳಿಯ ಪಕ್ಕದಲ್ಲಿ ಯುವಕರು ಔತಣಕೂಟ ಮಾಡಿದ್ದಾರೆ. ಬಳಿಕ ತಮಾಷೆಗೆಂದು ಹಳಿಯ ಮೇಲೆಯೇ ಮಲಗಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಮಾರ್ಗವಾಗಿ ಹೊರಟಿದ್ದ ಹುಬ್ಬಳ್ಳಿ-ಸಿಂಧನೂರು ಪ್ಯಾಸೆಂಜರ್ ರೈಲು ಬಂದಿದ್ದು, ಯುವಕರು ಭೀಕರವಾಗಿ ಸಾವನ್ನಪ್ಪಿದ್ದಾರೆ. ಗದಗ ವಿಭಾಗದ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯುವಕರು ರೈಲ್ವೆ ಹಳಿ ಮೇಲೆ ಮದ್ಯಸೇವನೆ ಮಾಡಿ, ಅಮಲಿನಲ್ಲಿ ಹಳಿ ಮೇಲೆ ಮಲಗಿದ್ದರು. ಇದೇ ಸಮಯಕ್ಕೆ ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುವ ರೈಲು ಯುವಕರ ಮೇಲೆ ಹರಿದು ಹೋಗಿದೆ. ರೈಲು ಹರಿಸ ರಭಸಕ್ಕೆ ಮೃತದೇಹಗಳು ಹಳಿಯ ಮೇಲೆಯೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.