ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿಯ ಗದ್ದಲ ನಡುವೆಯೂ ರಾಜ್ಯ ಸರ್ಕಾರ 2024ನೇ ಸಾಲಿನ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ವಿಧಾನಮಂಡಲ (ಅನರ್ಹತಾ ನಿವಾರಣಾ) ವಿಧೇಯಕ, ಕರ್ನಾಟಕ ಸಿನಿ & ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡಿಸಿದೆ.
ಅನರ್ಹತೆ ತಡೆ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕಚೇರಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಕಚೇರಿ, ಸಿಎಂ ಮತ್ತು ಉಪಸಭಾಪತಿಗಳ ಸಲಹೆಗಾರರ ಕಚೇರಿಗೆ (ನೀತಿ ಮತ್ತು ಯೋಜನೆ) ವಿನಾಯತಿ ನೀಡಲಾಗಿದೆ. ಸದ್ಯದ ವ್ಯವಸ್ಥೆಯಲ್ಲಿ ಶಾಸಕ, ಪರಿಷತ್ ಸದಸ್ಯರು, ದೆಹಲಿ ವಿಶೇಷ ಪ್ರತಿನಿಧಿ, ಕಾನೂನು ಸಲಹೆಗಾರ ಸ್ಥಾನ ಲಾಭದಾಯಕ ಹುದ್ದೆಯಡಿ ಅನರ್ಹತೆ ಭೀತಿ ಇದೆ. ಹಾಗಾಗಿ ಸಿಎಂ ಕಾನೂನು ಸಲಹೆ, ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಯನ್ನು ಅನರ್ಹತೆ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿ ಮಾಡಲಾಗಿದೆ.
ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ: ಜಿಎಸ್ಟಿ ಕಾನೂನಿಗೆ 22 ತಿದ್ದುಪಡಿ ತಂದಿದ್ದು, 6 ತಿದ್ದುಪಡಿ ವರ್ತಕರ ಸ್ನೇಹಿ, 16 ಅಂಶ ಸುಗಮ ತೆರಿಗೆ ಸಂಗ್ರಹ ಮತ್ತು ಆಡಳಿತಕ್ಕೆ ಸಂಬಂಧಿಸಿದ ತಿದ್ದುಪಡಿಗಳಾಗಿವೆ. ವರ್ತಕರ ಸ್ನೇಹಿ ಮತ್ತು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಬರುವುದಕ್ಕೆ ಪೂರಕವಾಗಿದೆ. ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ತಯಾರಿಕೆಯಲ್ಲಿ ಬಳಸುವ ಯಂತ್ರಗಳ ನೋಂದಣಿ ಮಾಡದಿದ್ದಲ್ಲಿ ದಂಡ ವಿಧಿಸುವಿಕೆಯನ್ನು ಸಕ್ರಿಯಗೊಳಿಸಲು ಮಸೂದೆಯನ್ನು ಉದ್ದೇಶಿಸಲಾಗಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆಯ ಉದ್ದೇಶವು ಕಲ್ಯಾಣ ಮಂಡಳಿಯನ್ನು ರಚಿಸುವುದು. ರಾಜ್ಯದ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣವನ್ನು ಒದಗಿಸಲು ಹಣಕಾಸಿನ ಯೋಜನೆಗಳಿಗೆ ನಿಧಿಯನ್ನು ಸ್ಥಾಪಿಸುವುದಾಗಿದೆ.