ಬೆಂಗಳೂರು: 2002ರಲ್ಲಿ ಪೊಲೀಸರು ಹಾಗೂ ಅವರ ಕುಟುಂಬಸ್ಥರಿಗಾಗಿ ರಾಜ್ಯ ಸರ್ಕಾರ ಆರಂಭಿಸಿದ್ದ ಸಮಗ್ರ ಆರೋಗ್ಯ ಸೇವೆ 'ಆರೋಗ್ಯ ಭಾಗ್ಯ ಯೋಜನೆ' ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯೋಜನೆಯು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮಾಸಿಕ ಕೊಡುಗೆಯಿಂದ ಮತ್ತು ಸರ್ಕಾರದಿಂದ ವೈಧ್ಯಕೀಯ ಮರುಪಾವತಿಯ ಮೂಲಕ ನಿರ್ವಹಿಸಲ್ಪಡುವ ಸ್ವ ಹಣಕಾಸು ಯೋಜನೆಯಾಗಿದೆ. ವೈದ್ಯಕೀಯ ಆಡಳಿತದಲ್ಲಿ ಪರಿಣತಿಯನ್ನು ಹೊಂದಿರುವ ನೋಡಲ್ ಎಜೆನ್ಸಿಯವರು ಈ ಯೋಜನೆಯನ್ನು ನಿರ್ವಹಿಸುತ್ತಿದ್ದಾರೆ. ಯೋಜನೆಯಡಿಯಲ್ಲಿ ಮೊದಲೇ ಇರುವಂತ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಆಸ್ಪತ್ರೆಗೆ ಪ್ರವೇಶದ ಸಮಯದಿಂದ ಚಿಕಿತ್ಸೆ ಮುಗಿದ ನಂತರ ಹೊರಹೋಗುವವರೆಗೂ ಸಂಪೂರ್ಣ ವಹಿವಾಟು ನಗದು ರಹಿತವಾಗಿರುತ್ತದೆ. ಕರ್ನಾಟಕ ಸರ್ಕಾರದ ಪ್ರಕಾರ ವೈದ್ಯಕೀಯ ಹಾಜರಾತಿ ನಿಯಮಗಳು 1963 ರ ಅಡಿಯಲ್ಲಿ ಕೃತಕ ಅಂಗಾಂಗ (Implants & prosthesis) ಜೋಡಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯಡಿ ಎಲ್ಲಾ ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿಲ್ಲ. ಯೋಜನೆ ಅಡಿಯಲ್ಲಿರುವ ಆಸ್ಪತ್ರೆಗಳು ವೆಚ್ಚಗಳನ್ನು ಮರುಪಾವತಿಸಲು ನಿರಾಕರಿಸುತ್ತಾರೆಂದು ಹೇಳಿದ್ದಾರೆ.
ನಗರದಲ್ಲಿ 63 ಸೇರಿದಂತೆ 170 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, 4-5 ದಿನ ಅಥವಾ ಅದಕ್ಕಿಂತ ಹೆಚ್ಚಿನ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಹಣ ಮರುಪಾವತಿಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಶ್ರೇಣಿಯ ಆಧಾರದ ಮೇಲೆ ಯೋಜನೆಯಡಿ ಮಾಸಿಕವಾಗಿ 200 ರಿಂದ 250 ರೂ.ಗಳನ್ನು ಕಡಿತ ಮಾಡಲಾಗುತ್ತಿದೆ. ಆದಾಗ್ಯೂ, ಚಿಕಿತ್ಸೆಗಳು ವಿಭಿನ್ನವಾಗಿರುತ್ತದೆ. ಅರೆ ಖಾಸಗಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಾರ್ಡ್ ಗಳನ್ನು ಸಂಬಳದ ಹಾಗೂ ಶ್ರೇಣಿಗಳ ಆಧಾರದ ಮೇಲೆ ನೀಡಲಾಗುತ್ತದೆ, ಇದರ ಪರಿಣಾಮವಾಗಿ ಆರೋಗ್ಯ ಅಧಿಕಾರಿಗಳು ಯೋಜನೆಯ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವವರಿಗೆ ತ್ವರಿತ ಮತ್ತು ಸರಿಯಾದ ಕಾಳಜಿಯನ್ನು ಒದಗಿಸುವುದಿಲ್ಲ. ಸಾಮಾನ್ಯ ವಾರ್ಡ್‌ಗಳಲ್ಲಿ ಒದಗಿಸಲಾದ ಚಿಕಿತ್ಸೆಯು ಖಾಸಗಿ ವಾರ್ಡ್‌ಗಳಿಗೆ ಹೋಲಿಸಿದರೆ ಪರಿಣಾಮಕಾರಿಯಾಗಿಲ್ಲ, ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯೋಜನೆಯಡಿ ಬೆಂಗಳೂರಿನಲ್ಲಿ 63 ಆಸ್ಪತ್ರೆಗಳು ಪಟ್ಟಿಯಲ್ಲಿವೆ. ಇನ್ನುಳಿದಂತೆ ಕೊಡಗು, ಧಾರವಾಡ, ಕೊಪ್ಪಳ, ಬಳ್ಳಾರಿ, ಗದಗ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಂದು ಆಸ್ಪತ್ರೆಗಳು ಮಾತ್ರ ಪಟ್ಟಿಯಲ್ಲಿವೆ.
ತುರ್ತು ಸಂದರ್ಭಗಳಲ್ಲಿ ಜನರು ಸಾಮಾನ್ಯವಾಗಿ ಹತ್ತಿರದ ಆಸ್ಪತ್ರೆಗೆ ಧಾವಿಸುತ್ತಾರೆ. ಒಂದು ಜಿಲ್ಲೆಯಲ್ಲಿ ಕೇವಲ ಒಂದು ಅಥವಾ ಎರಡು ಆಸ್ಪತ್ರೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ, ಅನಾರೋಗ್ಯಕ್ಕೀಡಾದಾಗ ಸಿಬ್ಬಂದಿಗಲು ಯೋಜನೆ ಬಗ್ಗೆ ಯೋಚಿಸಬೇಕೆ? ಚಿಕಿತ್ಸೆಯತ್ತ ಗಮನಿಸಿ ಆಸ್ಪತ್ರೆಗಳಿಗೆ ಹೋಗಬೇಕೆ? ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಶ್ನಿಸಿದ್ದಾರೆ.
ನ್ಯುಮೋನಿಯಾದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಆಸ್ಪತ್ರೆ 1.8 ಲಕ್ಷ ರೂ.ಗಳ ಬಿಲ್ ಮಾಡಿತ್ತು. ಆಧರೆ, ಒಟ್ಟು ವೆಚ್ಚದ ಶೇ.50 ಕ್ಕಿಂತ ಕಡಿಮೆ ಹಣ ಮರುಪಾವತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಆಡಳಿತಾತ್ಮಕ ಪ್ರಕ್ರಿಯೆಗಳಿಂದಾಗಿ ಮರುಪಾವತಿ ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.