ಶಿರೂರು (ಅಂಕೋಲಾ): ಉತ್ತರಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದ ಕೋಯಿಕ್ಕೋಡ್ ನಿವಾಸಿ ಅರ್ಜುನ್‌ಗಾಗಿ ಹುಡುಕಾಟ ತೀವ್ರಗೊಂಡಿದೆ.
ಕೇರಳಕ್ಕೆ ತೆರಳುತ್ತಿದ್ದ ವೇಳೆ ಅರ್ಜುನ್ ಅವರು ಲಾರಿ ಸಮೇತ ನಾಪತ್ತೆಯಾಗಿದ್ದರು. ಜಗಲ್‌ಪೇಟೆಯಿಂದ ಮರ ತುಂಬಿಕೊಂಡು ಪ್ರಯಾಣ ಆರಂಭಿಸಿದ್ದ ಅವರು ಕೇರಳ ರಾಜ್ಯದತ್ತ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿತ್ತು. ಶಿರೂರಿನಲ್ಲಿರುವ ಲಕ್ಷ್ಮಣ್ ನಾಯ್ಕ್ ಅವರ ಕ್ಯಾಂಟೀನ್ ನಲ್ಲಿ ಅರ್ಜುನ್ ಅವರು ಚಹಾ ಕುಡಿಯಲು ನಿಂತಿದ್ದಾಗ ಘಟನೆ ನಡೆದಿತ್ತು.
ನಾಪತ್ತೆ ವಿಚಾರ ತಿಳಿದ ಅರ್ಜುನ್ ಅವರ ಕುಟುಂಬಸ್ಥರು, ರಕ್ಷಣಾ ಕಾರ್ಯಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಅವರ ಸಹೋದರಿ ಮಾತನಾಡಿ. ಜುಲೈ 16 ರಂದು ನಮ್ಮ ಸಹೋದರ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ತಿಳಿಸಲಾಯಿತು. ಆದರೆ, ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ಇಷ್ಟು ವಿಳಂಬವಾದರೆ ನಾವು ಯಾವ ಭರವಸೆ ಇಟ್ಟುಕೊಳ್ಳಬೇಕು. ಅಲ್ಲಿ ಅವರಿಗೆ ಅಗತ್ಯವಿರುವ ಸೌಲಭ್ಯಗಳಿಲ್ಲದಿದ್ದರೆ ಎಲ್ಲಿ ಲಭ್ಯವಿದೆಯೋ ಅಲ್ಲಿಂದ ತರಬೇಕಿತ್ತು ಎಂದು ತಿಳಿಸಿದ್ದಾರೆ.
ಭೂಕುಸಿತ ಸ್ಥಳದಲ್ಲಿ ಬಾಲಕನ ಕೈ ತೋಳು ಪತ್ತೆ
ಈ ನಡುವೆ ಭೂಕುಸಿತದ ಸ್ಛಳದಲ್ಲಿ ಬಾಲಕನೊಬ್ಬನ ತೋಳು ಪತ್ತೆಯಾಗಿದ್ದು, ಇದು ಲಕ್ಷ್ಮಣ್ ನಾಯ್ಕ್ ಅವರ 10 ವರ್ಷದ ಮಗ ರೋಷನ್‌ಗೆ ಸೇರಿದ್ದು ಎಂದು ಸ್ಥಳೀಯರು ಹೇಳಿದ್ದಾರೆ, ಶವ ಮೊದಲೇ ಪತ್ತೆಯಾಗಿತ್ತು. ಆದರೆ, ಅವಶೇಷಗಳಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿದ್ದ ಹಿನ್ನೆಲೆಯ್ಲಿ ಡಿಎನ್‌ಎ ಪರೀಕ್ಷೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.