ಬೆಂಗಳೂರು: ನೀರಾವರಿ ನಾಲುವೆಗಳಿಂದ ಅಕ್ರಮವಾಗಿ ನೀರು ಹರಿಸುವುದನ್ನು ತಡೆಗಟ್ಟಲು ಮತ್ತು ಕೊನೆಯವರೆಗೂ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದೆ. ಆಸ್ತಿ ತೆರಿಗೆ ಬಾಕಿ ಸಂಗ್ರಹಿಸಲು ವಿಫಲರಾದ ಪಾಲಿಕೆ ಅಧಿಕಾರಿಗಳಿಗೆ ದಂಡ ವಿಧಿಸಿ ಜೈಲು ಶಿಕ್ಷೆ ವಿಧಿಸುವ ಇನ್ನೊಂದು ವಿಧೇಯಕವನ್ನೂ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಡಿಸಿದ ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕವು ಈ ಹಿಂದಿದ್ದ 1,000 ರೂ.ನಿಂದ 2 ಲಕ್ಷ ರೂ. ದಂಡ ಮತ್ತು ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಿದೆ. ಮಸೂದೆ ಪ್ರಕಾರ, ನಾಲುವೆ ಅಥವಾ ಪೈಪ್ ಒಡೆಯುವುದು, ಕಾಲುವೆ ಒಡೆದು ಪೈಪ್ ಅಳವಡಿಸುವುದು ಅಥವಾ ಇಂಜಿನ್ ಹಾಕುವುದು ಮತ್ತಿತರ ಕಾಲುವೆ ಸುರಕ್ಷತೆಗೆ ಹಾನಿಯಾಗುವಂತಹ ಯಾವುದೇ ಸಲಕರಣೆ ಇಡುವುದು ಉಲ್ಲಂಘನೆಯಾಗಲಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಂಡಿಸಿದ ಕರ್ನಾಟಕ ಪುರಸಭೆಗಳು ಮತ್ತಿತರ ಕಾನೂನು (ತಿದ್ದುಪಡಿ) ಮಸೂದೆಯಲ್ಲಿ ಅಧಿಕಾರಿಗಳಿಗೆ ದಂಡ ವಿಧಿಸಲು ಅವಕಾಶವಿದೆ. ಮಸೂದೆಯ ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ಸಂಗ್ರಹಿಸಲು ವಿಫಲರಾದ ಪುರಸಭೆಯ ಯಾವುದೇ ಅಧಿಕಾರಿ ಅಥವಾ ನೌಕರನಿಗೆ ಪ್ರತಿ ಪ್ರಕರಣದಲ್ಲಿ ರೂ 50,000 ವರೆಗೆ ದಂಡ ವಿಧಿಸಲಾಗುತ್ತದೆ ಮತ್ತು 15 ದಿನಗಳ ಜೈಲುವಾಸ ಶಿಕ್ಷೆಯನ್ನು ಸಹ ವಿಧಿಸಬಹುದು.
ಉಪ-ಕಾನೂನುಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳು ಅಥವಾ ಅನಧಿಕೃತ ಲೇಔಟ್‌ಗಳು, ಕಂದಾಯ ಭೂಮಿ ಮತ್ತಿತರ ಕಡೆಗಳಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಪುರಸಭೆಗಳಿಗೆ ಅಧಿಕಾರ ನೀಡುವ ನಿಬಂಧನೆಯನ್ನು ಇದು ಹೊಂದಿದೆ. ಅಂತಹ ಆಸ್ತಿಗಳು ಮೊದಲ ವರ್ಷಕ್ಕೆ ಪಾವತಿಸಬೇಕಾದ ಆಸ್ತಿ ತೆರಿಗೆಯನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ.ಸರ್ಕಾರಿ ಭೂಮಿ ಅಥವಾ ಯಾವುದೇ ಸ್ಥಳೀಯ ಸಂಸ್ಥೆ, ಶಾಸನಬದ್ಧ ಸಂಸ್ಥೆ ಅಥವಾ ಸರ್ಕಾರದ ಒಡೆತನದ ಅಥವಾ ನಿಯಂತ್ರಣದಲ್ಲಿರುವ ಸಂಸ್ಥೆಗೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ವಿನಾಯಿತಿ ನೀಡಲಾಗುತ್ತದೆ ಎಂದು ಮಸೂದೆಯು ಹೇಳುತ್ತದೆ.