ಉಡುಪಿ: ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ಮತ್ತು ಅವರ ಸಹಾಯಕನ ಸಮಯಪ್ರಜ್ಞೆ ಇಂದು ಉಡುಪಿ ರೈಲು ನಿಲ್ದಾಣದ ಬಳಿ ಭಾರೀ ಅವಘಡ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳಿಗಳ ಮೇಲೆ ಬೃಹತ್ ಮರ ಬಿದ್ದಿರುವುದನ್ನು ಗಮನಿಸಿದ ಅವರು ಸರಿಯಾದ ಸಮಯಕ್ಕೆ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.
ರೈಲು ನಿಲುಗಡೆಯಾದ ನಂತರ, ರೈಲ್ವೇ ಸಿಬ್ಬಂದಿಗಳು ಹಳಿಗಳ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಿದರು. ಕೊಂಕಣ ರೈಲ್ವೇ ಮೂಲಗಳ ಪ್ರಕಾರ, ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬಾರ್ಕೂರಿನಿಂದ ಉಡುಪಿಗೆ ತೆರಳುತ್ತಿದ್ದಾಗ 9.18ಕ್ಕೆ ಹಳಿಗಳ ಮೇಲೆ ಮರವನ್ನು ಗಮನಿಸಿದ ಸಿಬ್ಬಂದಿ ತ್ವರಿತವಾಗಿ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದರು.
ಟ್ರ್ಯಾಕ್ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಓವರ್‌ಹೆಡ್ ಸಲಕರಣೆ ತಂಡ (OHT) ಮರವನ್ನು ತಕ್ಷಣವೇ ತೆಗೆದುಹಾಕಿದೆ. ಸ್ವಲ್ಪ ಸಮಯದ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು. ಅವರ ಸಮಯೋಚಿತ ಮತ್ತು ಸಮಯಪ್ರಜ್ಞೆಯನ್ನು ಗುರುತಿಸಿ, ಕೊಂಕಣ ರೈಲ್ವೆ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ರೈಲಿನ ಸಿಬ್ಬಂದಿಗೆ ತಲಾ 15,000 ರೂಪಾಯಿ ನಗದು ಬಹುಮಾನವನ್ನು ನೀಡಿದರು. ಬಳಿಕ ಸುರತ್ಕಲ್ ರೈಲು ನಿಲ್ದಾಣದಲ್ಲಿ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.