ಬೆಂಗಳೂರು: 2024-2025ರ ಕೇಂದ್ರ ಬಜೆಟ್‌ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ ರೂ. 7,559 ಕೋಟಿ ಮೀಸಲಿಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಪ್ರಕಟಿಸಿದ್ದಾರೆ. ದೇಶಾದ್ಯಂತ ಸುದ್ದಿಗಾರರೊಂದಿಗೆ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಒಟ್ಟು 2.62 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಅದರಲ್ಲಿ ಸುರಕ್ಷತೆ ಸಂಬಂಧಿತ ಚಟುವಟಿಕೆಗಳಿಗೆ ರೂ.1,09,000 ಕೋಟಿ ಘೋಷಿಸಲಾಗಿದೆ ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ್, ಕೆಲಸದ ವೆಚ್ಚದ ಅಡಿಯಲ್ಲಿ ವಲಯಕ್ಕೆ ನೀಡಿರುವ 7,559 ಕೋಟಿ ಇದುವರೆಗಿನ ಅತಿ ಹೆಚ್ಚಿನ ಬಜೆಟ್ ಆಗಿದೆ. ರೂ. 47,016 ಕೋಟಿ ವೆಚ್ಚದಲ್ಲಿ 3,480 ಕಿಮೀ ಉದ್ದದ 31 ಯೋಜನೆಗಳ ಕಾಮಗಾರಿ ಸದ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ನೈರುತ್ಯ ರೈಲ್ವೆ ವಲಯ ಮಾರ್ಚ್ 2025 ರ ವೇಳೆಗೆ ಶೇ. 100 ರಷ್ಟು ವಿದ್ಯುದ್ದೀಕರಣದ ಗುರಿಯನ್ನು ಹೊಂದಿದೆ. 2009-2014ರ ಅವಧಿಯಲ್ಲಿ ವಿದ್ಯುದ್ದೀಕರಣವು ವರ್ಷಕ್ಕೆ ಸರಾಸರಿ 18 ಕಿ.ಮೀ ಆಗಿದ್ದರೆ, 2014 ಮತ್ತು 2024 ರ ನಡುವಿನ ಸರಾಸರಿ ವಿದ್ಯುದ್ದೀಕರಣವು 317 ಕಿ.ಮೀ ಆಗಿದ್ದು, 18 ಪಟ್ಟು ಹೆಚ್ಚಾಗಿದೆ. ಅಂತೆಯೇ, ಕಳೆದ ಒಂದು ದಶಕದಲ್ಲಿ ಸರಾಸರಿ ಹೊಸ ಮಾರ್ಗದ ಉದ್ದವು 163 ಕಿಮೀಗಳಿಗೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದು 2009 ರಿಂದ 2014 ರವರೆಗೆ ವರ್ಷಕ್ಕೆ ಸರಾಸರಿ 113 ಕಿಲೋಮೀಟರ್‌ಗಳಿಗೆ ಹೋಲಿಸಿದರೆ 1.4 ಪಟ್ಟು ಹೆಚ್ಚಳವಾಗಿದೆ ಎಂದರು.
ಅಮೃತಿ ಭಾರತ್ ನಿಲ್ದಾಣ ಯೋಜನೆಯಡಿ 1,103 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ 46 ರೈಲು ನಿಲ್ದಾಣಗಳನ್ನು ನವೀಕರಣ ಮಾಡಲಾಗಿದೆ. ಯಶವಂತಪುರ ನಿಲ್ದಾಣವನ್ನು 367 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, ತಾತ್ಕಾಲಿಕವಾಗಿ ಜುಲೈ 2025 ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು 484 ಕೋಟಿ ರೂ. ವೆಚ್ಚದಲ್ಲಿ 2025 ರ ಅಕ್ಟೋಬರ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ವಿವರಿಸಿದರು. ಕಳೆದ ದಶಕದಲ್ಲಿನ ಸಾಧನೆಗಳನ್ನು ವಿವರಿಸಿದ ಅವರು, ಕರ್ನಾಟಕದಾದ್ಯಂತ 638 ರೋಡ್ ಓವರ್ ಬ್ರಿಡ್ಜ್‌ಗಳು ಮತ್ತು ರೋಡ್ ಅಂಡರ್ ಬ್ರಿಡ್ಜ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಉಪನಗರ ರೈಲು ಯೋಜನೆಗೆ 350 ಕೋಟಿ: 148 ಕಿಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಮಂಗಳವಾರ ಬಿಡುಗಡೆಯಾದ ಕೇಂದ್ರ ಬಜೆಟ್‌ನಲ್ಲಿ 350 ಕೋಟಿ ರೂ. ಘೋಷಿಸಲಾಗಿದೆ. ಕೆ-ರೈಡ್ ಅನುಷ್ಠಾನಗೊಳಿಸುತ್ತಿರುವ ರೂ 15,767 ಕೋಟಿ ಮೊತ್ತದ ಯೋಜನೆಯು ನಾಲ್ಕು ಕಾರಿಡಾರ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಎರಡರಲ್ಲಿ ಕೆಲಸ ಪ್ರಾರಂಭವಾಗಿದೆ. ಇದು ನಿಖರವಾಗಿ ನಾವು ಬಯಸಿದ ಮೊತ್ತವಾಗಿದ್ದು, ಅದನ್ನು ಪಡೆದುಕೊಂಡಿದ್ದೇವೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಕೇಂದ್ರ ಬಜೆಟ್ ನಲ್ಲಿ ನೀಡಿರುವ ಈ ಅನುದಾನವನ್ನು ಹೀಲಲಿಗೆಯಿಂದ ರಾಜನಕುಂಟೆ (ಕನಕ ಮಾರ್ಗ) 46.8 ಕಿ.ಮೀ. ಸಂಪರ್ಕ ಕಲ್ಪಿಸುವ ಕಾರಿಡಾರ್-2 ಹಾಗೂ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರ (ಮಲ್ಲಿಗೆ ಲೈನ್)ವರೆಗೆ 25 ಕಿ.ಮೀ.ವರೆಗೆ ಕಾರಿಡಾರ್ -4 ಹಾಗೂ ಯಲಹಂಕದಿಂದ ದೇವನಹಳ್ಳಿ ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್ (1ಬಿ) ಗೆ ಬಳಸಿಕೊಳ್ಳಲಾಗುವುದು. ಅನುದಾನಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಕಳೆದ ವರ್ಷದವರೆಗೆ ನಾವು ಕೇಂದ್ರದಿಂದ 500 ಕೋಟಿ ರೂಪಾಯಿಗಳನ್ನು ಪಡೆದಿದ್ದೇವೆ ಮತ್ತು ಈಗ ಈ ಹೆಚ್ಚುವರಿ 350 ಕೋಟಿ ರೂಪಾಯಿಗಳನ್ನು ಪಡೆದಿದ್ದೇವೆ ಎಂದು ಅವರು ಹೇಳಿದರು.