ಕೋಲಾರ: ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದ ಬೈಕ್ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಕೋಲಾರ ಜಿಲ್ಲಾ ಪೊಲೀಸರು, ನಿತ್ಯ ರಸ್ತೆಗಳಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ್ದ 126 ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಿ ನಾಶ ಮಾಡಿದ್ದಾರೆ.
ಕೋಲಾರದ ಅಮ್ಮಾವರಪೇಟೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರ ಸಮ್ಮುಖದಲ್ಲಿ ಸೈಲೆನ್ಸರ್‌ಗಳನ್ನು ನಾಶಪಡಿಸಲಾಯಿತು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ನೂರಾರು ಜನ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ನಿಖಿಲ್ ಬಿ, ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಬಳಸಿದ ದ್ವಿಚಕ್ರ ವಾಹನದ ಮಾಲೀಕರಿಗೆ ಪೊಲೀಸರು ದಂಡವನ್ನೂ ವಿಧಿಸಿದ್ದಾರೆ. ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಗುರುತಿಸುವ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದರು.
ಈಗಾಗಲೇ ವೀಲಿಂಗ್ ಮಾಡುವವರಿಗೆ ದಂಡ ವಿಧಿಸಲಾಗಿದೆ. ಬೆಂಗಳೂರು-ಚೆನ್ನೈಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವೀಲಿಂಗ್ ಮಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಪೊಲೀಸ್ ಸಿಬ್ಬಂದಿ ಮತ್ತು ಗಸ್ತು ತಂಡಗಳಿಗೆ ಸೂಚನೆ ನೀಡಲಾಗಿದೆ ಎಂದು ನಿಖಿಲ್ ಹೇಳಿದರು.
ವೀಲಿಂಗ್ ಮಾಡುವವರ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕರ್ಕಶ ಶಬ್ದ ಮಾಡುವ ವಾಹನಗಳು ಕಂಡುಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ವಾಹನಗಳನ್ನು ತಕ್ಷಣವೇ ಪತ್ತೆಹಚ್ಚಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.