ಬೆಂಗಳೂರು: ಮಹರ್ಷಿ 'ವಾಲ್ಮೀಕಿ ನಿಗಮ'ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ವ್ಯಾಪಕವಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿ ಮೊತ್ತದ ಲೂಟಿ ಹಣ ಪಡೆದಿರುವ ಶಂಕಿತ ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ನಿಗಮದಿಂದ ದೋಚಿದ ಹಣವನ್ನು ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಮದ್ಯ ಖರೀದಿ ಮತ್ತು ಕೆಲವು ಐಷಾರಾಮಿ ವಾಹನಗಳ ಖರೀದಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇತ್ತೀಚಿಗೆ ಹೇಳಿದ್ದ ಜಾರಿ ನಿರ್ದೇಶನಾಲಯ, ಈ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಕುರಿತು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಂಧಿತ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹಾಗೂ ಹಣಕಾಸು ಇಲಾಖೆ ಪಾತ್ರವೂ ಇದೆ ಎಂದು ಹೆಸರಿಸುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕಲ್ಲೇಶ್ ಆರೋಪಿಸಿದ್ದಾರೆ. ಕಲ್ಲೇಶ್ ಭ್ರಷ್ಟಾಚಾರ ಆರೋಪದ ಮೇಲೆ ಇತ್ತೀಚಿಗೆ ಸೇವೆಯಿಂದ ಅಮಾನತುಗೊಂಡಿದ್ದರು. ಇಬ್ಬರು ಇಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಮತ್ತು ಮುರಳಿ ಕಣ್ಣನ್ ಅವರನ್ನು ಕಲ್ಲೇಶ್ ಗುರುತಿಸಿದ್ದರು.
ಕಲ್ಲೇಶ್ ಅವರ ದೂರಿನ ಮೇರೆಗೆ ರಾಜ್ಯ ಪೊಲೀಸರು ಆ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಮಾನತು ಪ್ರಕರಣದಿಂದ ಮುಕ್ತರಾಗಲು ಅವರಿಗೆ ಉನ್ನತ ಮಟ್ಟದ ವ್ಯಕ್ತಿಯಿಂದ ಒತ್ತಡ ಬಂದಿದೆ. ಕಲ್ಲೇಶ್ ವಿರುದ್ಧದ ಆಪಾದಿತ ಭ್ರಷ್ಟಾಚಾರ ಆರೋಪಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಮತ್ತು ಸಿಬಿಐ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದೇ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್ ಐಆರ್ ನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳ ಹೇಳಿಕೆಗಳನ್ನು ಇಡಿ ದಾಖಲಿಸುತ್ತಿದ್ದು, ಇನ್ನೂ ಕೆಲವರಿಗೆ ಶೀಘ್ರದಲ್ಲೇ ಸಮನ್ಸ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.