ದಿನೇಶ್ ಗುಂಡೂರಾವ್ 
ರಾಜ್ಯ

ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌; ಸೋಂಕು ಹೆಚ್ಚಿರುವ ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ!

ಡೆಂಗ್ಯೂ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡುಬರುತ್ತಿವೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ ಕಡಿಮೆಯಾಗಬಹುದು. ಆದರೆ, ಬೆಂಗಳೂರಿನಲ್ಲಿ ಇದು ಹೆಚ್ಚಾಗಬಹುದು.

ಬೆಂಗಳೂರು: ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಗಳ ಜತೆ ಸಭೆ ನಡೆಸಿದ ಸಚಿವರು, ಮಳೆ, ಪ್ರವಾಹದ ನಡುವೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನ ಕಡಿಮೆಯಾಗಬಾರದು ಎಂದು ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದೆ.‌ ಆದರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇಷ್ಟರೊಳಗೆ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಅಲರ್ಟ್ ಆಗಿರಬೇಕು. ಹೀಗಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಹಕಾರ ನೀಡಿ ಡೆಂಗ್ಯೂ ಹತೋಟಿಗೆ ತರುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನಡೆಯಬೇಕು. ಜನರಲ್ಲಿ ಡೆಂಗ್ಯೂ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆದರೆ ಡೆಂಗ್ಯೂ ಹತೋಟಿಗೆ ತರುವ ಕ್ರಮಗಳು ಸ್ಥಳದಲ್ಲಿ ಅನುಷ್ಠಾನಗೊಳ್ಳುವುದು ಅತಿ ಮುಖ್ಯವಾಗಿದೆ.

ವಿಶೇಷವಾಗಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ಡೆಂಗ್ಯೂ ಹೆಚ್ಚಿರುವ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಟಿ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಸೂಚನೆ ನೀಡಿದರು.

ಕೇವಲ ಭೇಟಿ ಕೊಡುವುದಲ್ಲ. ಎರಡು ಮೂರು ದಿನಗಳವರೆಗೆ ಸ್ಥಳದಲ್ಲೇ ಇದ್ದು ಮಾನಿಟರ್ ಮಾಡಬೇಕು. ಸ್ಥಳದಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳು ಅನುಷ್ಠಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌

ಅಲ್ಲದೇ ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದರು.

ಡೆಂಗ್ಯೂ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡುಬರುತ್ತಿವೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ ಕಡಿಮೆಯಾಗಬಹುದು. ಆದರೆ, ಬೆಂಗಳೂರಿನಲ್ಲಿ ಇದು ಹೆಚ್ಚಾಗಬಹುದು. ಹೀಗಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ಹತೋಟಿಗೆ ಒತ್ತು ನೀಡಬೇಕಿದೆ.

ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಡೆಂಗ್ಯೂ ಡೆತ್ ಆಡಿಟ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿರುವ ಆರೋಗ್ಯ ಸಚಿವರು, ಯಾವುದನ್ನು ಮುಚ್ಚಿಡುವುದು ಬೇಡ. ಡೆಂಗ್ಯೂ ಡೆತ್‌ಗಳಾಗಿದ್ದರೆ ಅದನ್ನು ಡೆಂಗ್ಯೂ ಡೆತ್ ಎಂದೇ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT