ಬೆಂಗಳೂರು: ರಾಜ್ಯದಲ್ಲಿ ವಾಹನಗಳ ‘ಮಾಲಿನ್ಯ ನಿಯಂತ್ರಣ’ ಪ್ರಮಾಣಪತ್ರದ ದರ ಏರಿಕೆಯಾಗುವ ಸಾಧ್ಯತೆ ಇದೆ. ಕರ್ನಾಟಕ ಎಮಿಷನ್ ಪರೀಕ್ಷಾ ಕೇಂದ್ರಗಳ ಮಾಲೀಕರ ಸಂಘಗಳು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಬಾಡಿಗೆ ವೆಚ್ಚ, ಎಮಿಷನ್ ಚೆಕ್ ಉಪಕರಣಗಳು, ವೇತನ ಮತ್ತು ಓವರ್‌ಹೆಡ್‌ಗಳ ಹೆಚ್ಚಳದ ಬಗ್ಗೆ ತಿಳಿಸಿದ್ದು, ದರ ಪರಿಷ್ಕರಿಸಲು ಮನವಿ ಮಾಡಿದೆ.
ಸುಮಾರು ಮೂರು ವರ್ಷಗಳ ಹಿಂದೆ ದರ ಹೆಚ್ಚಿಸಲಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದು, ಸದ್ಯಕ್ಕೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಕ್ಕೆ ದ್ವಿಚಕ್ರ ವಾಹನಗಳಿಗೆ 65 ರೂ., ಆಟೋಗಳು 75 ರೂ., ನಾಲ್ಕು ಚಕ್ರದ ಪೆಟ್ರೋಲ್ ವಾಹನಗಳಿಗೆ 115 ರೂ., ಡೀಸೆಲ್ ವಾಹನಗಳು 160 ರೂ. ವಿಧಿಸಲಾಗುತ್ತಿದೆ.
ಇದೀಗ ದ್ವಿಚಕ್ರ ವಾಹನಗಳ ಎಮಿಷನ್ ದರವನ್ನು 110 ರೂ.ಗೆ, ಆಟೋಗಳಿಗೆ 100 ರೂ.ಗೆ, ನಾಲ್ಕು ಚಕ್ರದ ಪೆಟ್ರೋಲ್ ಮತ್ತು ಸಿಎನ್‌ಜಿ ವಾಹನಗಳ ದರವನ್ನು 200 ರೂ.ಗೆ ಮತ್ತು ಡೀಸೆಲ್ ವಾಹನಗಳ ಎಮಿಷನ್ ದರವನ್ನು 250 ರೂ.ಗೆ ಏರಿಸುವಂತೆ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
"ಎಮಿಷನ್ ಪರೀಕ್ಷೆಯ ದರಗಳನ್ನು ಪರಿಷ್ಕರಿಸಿ ಸುಮಾರು ಮೂರು ವರ್ಷಗಳಾಗಿವೆ. ಕರ್ನಾಟಕದಾದ್ಯಂತ 2,600 ಕ್ಕೂ ಹೆಚ್ಚು ಎಮಿಷನ್ ಪರೀಕ್ಷಾ ಕೇಂದ್ರಗಳಿವೆ. ಅವುಗಳಲ್ಲಿ 700 ಬೆಂಗಳೂರಿನಲ್ಲಿವೆ. ಪೆಟ್ರೋಲ್ ಪಂಪ್‌ಗಳ ಬಾಡಿಗೆ ದರಗಳು, ಎಮಿಷನ್ ಟೆಸ್ಟಿಂಗ್ ಉಪಕರಣಗಳ ಬೆಲೆ ಮತ್ತು ಸಿಬ್ಬಂದಿಯ ಸಂಬಳ ಹೆಚ್ಚಾಗಿದೆ. ಹೆಚ್ಚುತ್ತಿರುವ ವೆಚ್ಚವನ್ನು ನಿಭಾಯಿಸಲು, ನಾವು ದರ ಹೆಚ್ಚಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಾರಿಗೆ ಆಯುಕ್ತ ಯೋಗೀಶ್ ಅವರನ್ನು ಒತ್ತಾಯಿಸಿದ್ದೇವೆ ಎಂದು ಕರ್ನಾಟಕ ಎಮಿಷನ್ ಪರೀಕ್ಷಾ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷ ಯೋಗೇಶ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.