ಬೆಂಗಳೂರು: ಕಳೆದ 2 ವರ್ಷಗಳಿಂದ ಭಾರೀ ವಾಹನಗಳಿಗೆ ನಿಷೇಧವಿದ್ದ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಸೋಮವಾರದಿಂದ ಎಲ್ಲಾ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ರಾಜ್ಯದ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆಯ ತಾಂತ್ರಿಕ ಸಮಸ್ಯೆಗಳಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಇದೀಗ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, ರಾಜ್ಯ ಹೆದ್ದಾರಿ ಪ್ರಾಧಿಕಾರ ಎಲ್ಲಾ ವಾಹನಗಳ ಸಂಚಾರಕ್ಕೆ ಹಸಿರುನಿಶಾನೆ ತೋರಿಸಿದೆ.
ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಚಲಿಸುವ ವಾಹನ ಚಾಲಕರು ಹಾಗೂ ಪ್ರಯಾಣಿಕರು ಸರ್ವೀಸ್ ರಸ್ತೆಗೆ ಹೋಗಬೇಕಾಗಿತ್ತು. ಹೀಗಾಗಿ ಸಂಚಾರಿ ದಟ್ಟಣೆಯಲ್ಲಿ ಸಿಲುಕಿ ಭಾರೀ ತೊಂದರೆ ಅನುಭವಿಸಿದ್ದರು.
4.2 ಕಿ.ಮೀ ಉದ್ದದ ಮೇಲ್ಸೇತುವೆಯಲ್ಲಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ತುಮಕೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗುತ್ತಿತ್ತು. ಫ್ಲೈಓವರ್‌ನಲ್ಲಿ ಪ್ರಿಸ್ಟೈಡ್ ಕೇಬಲ್‌ಗಳ ಹಾಳಾದ ಹಿನ್ನಲೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದೀಗ ಹೊಸದಾಗಿ ಕೇಬಲ್‌ಗಳನ್ನು ಅಳವಡಿಸಿದ್ದು, ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಮೇಲ್ಸೇತುವೆಯ ವಿಶೇಷ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಭಾರೀ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಜೊತೆಗೆ ಮೇಲ್ಸೇತುವೆ ಎಡ, ಬಲ ಪಕ್ಕದಲ್ಲಿ ಗರಿಷ್ಠ 40 ಕಿ.ಮೀ ವೇಗದಲ್ಲಿ ಚಲಿಸುವಂತೆ ಹೆದ್ದಾರಿ ಅಧಿಕಾರಿಗಳು ಸೂಚಿಸಿದ್ದು, ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ.ಎನ್.ಅನುಚೇತ್ ಅವರು ಮಾತನಾಡಿ, ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ಮೇಲ್ಸೇತುವೆಯಲ್ಲಿ ಕೆಲ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6ರಿಂದ ಶನಿವಾರ ಬೆಳಗ್ಗೆ 6ರವರೆಗೆ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಭಾರೀ ವಾಹನಗಳು ಎಡ ಪಥದಲ್ಲಿ ಚಲಿಸಬೇಕು ಮತ್ತು ಅಂತಹ ವಾಹನಗಳಿಗೆ ಫ್ಲೈಓವರ್‌ನಲ್ಲಿ ಗಂಟೆಗೆ 40 ಕಿಮೀ ವೇಗದ ಮಿತಿಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
8ನೇ ಮೈಲಿ ಜೆಂಕ್ಷನ್ ಸಮೀಪ 102 ಮತ್ತು 103ನೇ ಪಿಲ್ಲನ್ ನಡುವೆ ಇರುವ ಮೂರು ಕೇಬಲ್ ಗಳು ಭಾಗಿದ್ದರಿಂದ 2021 ಡಿಸೆಂಬರ್ 25 ರಂದು ಮೇಲ್ಸೇತುವೆಯ ಮೇಲೆ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಪರಿಶೀಲನೆ ನಡೆಸಿ ಭಾರೀ ವಾಹನಗಳು ಸಂಚರಿಸಿದ್ದರಿಂದಲೇ ಕೇಬಲ್ ಗಳು ಬಾಗಿವೆ ಎಂದು ವರದಿ ನೀಡಿದ್ದರು.
2022 ಫೆಬ್ರವರಿ 16 ರಿಂದ ಲಘು ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೇಲ್ಸೇತುವೆಯ ಕ್ಷಮೆಯನ್ನು ಪರಿಶೀಲಿಸಿಲು ತಜ್ಞರ ಸಮಿತಿಯನ್ನು ರಚಿಸಿದ್ದರು. ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಾರದು ಎಂದು ವರದಿ ನೀಡಿದ್ದರಿಂದ ಹಗಲಿನಲ್ಲಿ ಲಘಉ ವಾಹನಗಳ ಸಂಚಾರಕ್ಕ ಅವಕಾಶ ಕಲ್ಪಿಸಲಾಗಿತ್ತು.
ಮೇಲ್ಸೇತುವೆಯ 120 ಪಿಲ್ಲರ್ ಹೊಂದಿದ್ದು, 2 ಪಿಲ್ಲರ್ ಗಳ ನಡುವೆ ತಲಾ 10ಪಂತೆ 1200 ಕೇಬಲ್ ಗಳಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ 2 ಪಿಲ್ಲರ್ ನಡುವೆ ಹೊಸದಾಗಿ 2 ಕೇಬಲ್ ಗಳನ್ನು ಅಳವಡಿಸಲು ಅವಕಾಶವೂ ಇತ್ತು. ಮೊದಲ ಹಂತದಲ್ಲಿ 120 ಪಿಲ್ಲರ್ ನಡುವೆ 240 ಕೇಬಲ್ ಗಳನ್ನು ಅಳವಡಿಸಿ ಮೇಲ್ಸೇತುವೆಯನ್ನು ಭದ್ರಪಡಿಸಲಾಗಿತ್ತು.
ಲೋಡ್ ಟೆಸ್ಟಿಂಗ್ ನಡೆಸಿ ಸೇತುವೆ ಸದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತು. 2ನೇ ಹಂತದಲ್ಲಿ 120 ಪಿಲ್ಲರ್ ನಡುವಿನ 1200 ಕೇಬಲ್ ಬದಲಾಯಿಲುವ ಕಾರ್ಯ ಆರಂಭವಾಗಿದೆ. ಕೇಬಲ್ ಅಳವಡಿವುವಾಗ ಸಿಮೆಂಟ್ ಕಾಂಕ್ರೀಟ್ ಹಾಕಿ ಭದ್ರಪಡಿಸಬೇಕಿದ್ದು, ಈ ವೇಳೆ ಮೇಲ್ಸೇತುವೆ ಮೇಲೆ ವಾಹನ ಸಂಚಾರ ಇರಬಾರದು ಎಂದು ತಜ್ಞರು ಸೂಚಿಸಿದ್ದರು. ಆದ್ದರಿಂದ ಪ್ರತಿ ಶುಕ್ರವಾರ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.