ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿ ಸಿಲುಕಿರುವ ಚಾರಣಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ರಚಿಸಿದೆ ಮತ್ತು ಅವರ ಮರಳಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಿಸಿದೆ.
ಮೇ 29 ರಂದು ಉತ್ತರಕಾಶಿಯಿಂದ 35 ಕಿಮೀ ದೂರದ ಚಾರಣಕ್ಕೆ 22 ಸದಸ್ಯರ ಟ್ರೆಕ್ಕಿಂಗ್ ತಂಡವನ್ನು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಕಳುಹಿಸಿತ್ತು. ಈ ತಂಡದಲ್ಲಿ ಕರ್ನಾಟಕದ 18, ಮಹಾರಾಷ್ಟ್ರದ ಒಬ್ಬರು ಹಾಗೂ ಮೂವರು ಸ್ಥಳೀಯ ಮಾರ್ಗದರ್ಶಕರಿದ್ದರು ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ.
ಉತ್ತರಾಖಂಡದ ಸಹಸ್ರತಾಲ್‌ನಲ್ಲಿ ಸಿಲುಕಿರುವ ಇತರರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ನಾಲ್ವರು ಚಾರಣಿಗರು ಸಾವನ್ನಪ್ಪಿದ್ದಾರೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಪಿಟಿಐಗೆ ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಗುರುತು ತಿಳಿದುಬಂದಿಲ್ಲ .ಗರ್ವಾಲ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರಕ್ಷಣಾ ಸೇವೆಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಬಳಕೆಗೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮನ್ವಯಗೊಳಿಸಲು ಡೆಹ್ರಾಡೂನ್‌ಗೆ ತೆರಳಿದ್ದಾರೆ. ಕರ್ನಾಟಕದ ಚಾರಣಿಗರ ತಂಡವು ಉತ್ತರಾಖಂಡದ ಸಹಸ್ರತಾಲ್‌ನ ಎತ್ತರದ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ತಮ್ಮ ಚಾರಣವನ್ನು ಪ್ರಾರಂಭಿಸಿತು. ಗಮ್ಯಸ್ಥಾನ ತಲುಪಿದ ನಂತರ ತಂಡವು ಮತ್ತೆ ಕ್ಯಾಂಪ್ ಗೆ ಮರಳಲು ಪ್ರಯತ್ನಿಸಿದೆ. ಆದರೆ, ವಾಪಸ್ಸು ಬರುವಾಗ ಮಧ್ಯಾಹ್ನ 2 ಗಂಟೆ ವೇಳೆಗೆ ಬಿರುಗಾಳಿ ಬೀಸಿದ್ದರಿಂದ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು,ಅಲ್ಲಿಯೇ ಸಿಲುಕಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಕರ್ನಾಟಕದ ಚಾರಣಿಗರು ಅಪಾಯದಲ್ಲಿ ಸಿಲುಕಿರುವ ಬಗ್ಗೆ ಕಳೆದ ರಾತ್ರಿ ಮಾಹಿತಿ ಸಿಕ್ಕಿತು. ವಿಷಯ ತಿಳಿದ ಕೂಡಲೇ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಭಾರತ ಸರ್ಕಾರದ ಗೃಹ ಇಲಾಖೆ ನೆರವಿನೊಂದಿಗೆ ಚಾರಣಿಗರನ್ನು ನಾಡಿಗೆ ಕರೆತರಲು ಎಲ್ಲಾ ರಕ್ಷಣಾ ಪ್ರಯತ್ನಗಳನ್ನು ಮುಂದುವರೆಸಲಾಗಿದೆ ಎಂದು ವಿಪತ್ತು ನಿರ್ವಹಣೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಚಾರಣಿಗರ ರಕ್ಷಕರು ಡೆಹರಾಡೂನ್ ತಲುಪುತ್ತಿದ್ದಾರೆ. ಮೃತಪಟ್ಟವರ ವರದಿಗಳನ್ನು ಸಹ ಪಡೆಯುತ್ತಿದ್ದೇವೆ. ಅದನ್ನು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮರು ದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ. ರಕ್ಷಣಾ ಕಾರ್ಯಾಚರಣೆಗಾಗಿ ಎರಡು ಚೀತಾ ಹೆಲಿಕಾಪ್ಟರ್ ಒಳಗೊಂಡ ಮೂರು ವಾಯುಪಡೆಯ ಹೆಲಿಕಾಪ್ಟರ್, ನಾಲ್ಕು ಹೆಲಿಮೊಬೈಲ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿರುವುದಾಗಿ ಅವರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇಂದು ಮಧ್ಯಾಹ್ನ ನಾನು ಕೂಡಾ ಡೆಹ್ರಾಡೂನ್ ಗೆ ತೆರಳಿದ್ದಾಗಿ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಮೃತ ಚಾರಣಿಗರ ಮೃತ ದೇಹ ಪಡೆಯಲು ಎಲ್ಲಾ ಪ್ರಯತ್ನ ಮಾಡುವಂತೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.ಉತ್ತರ ಕರ್ನಾಟಕ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.