ಬೆಂಗಳೂರು: ಕಾವೇರಿ 5ನೇ ಹಂತದ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಕಾವೇರು ನೀರು ಪೂರೈಕೆಯಲ್ಲಿ ವ್ಯತ್ಯವಾಗಿತ್ತು. ಇದೀಗ ನೀರು ಪೂರೈಕೆ ಸಹಜ ಸ್ಥಿತಿಗೆ ಮರಳಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಕಾವೇರಿ 5ನೇ ಹಂತದ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಗುರುವಾರ ಇಡೀ ನಗರಕ್ಕೆ ಕಾವೇರಿ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಇದರಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ನೀರಿನ ಪೂರೈಕೆ ಸಹಜ ಸ್ಥಿತಿಗೆ ಮರಳಿದೆ ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ಕಾಮಗಾರಿಗಳಲ್ಲದೆ, ವಾಜರಹಳ್ಳಿ, ವಸಂತಪುರ ಮತ್ತು ಕೊತ್ತನೂರು ಬಳಿ ಬಲ್ಕ್ ಫ್ಲೋ ಮೀಟರ್ ಅಳವಡಿಕೆ, ಲಕ್ಕಸಂದ್ರ ಮೆಟ್ರೊ ನಿಲ್ದಾಣದ ಬಳಿ ದೊಡ್ಡ ನೀರಿನ ಪೈಪ್‌ಗಳಲ್ಲಿ ಸೋರಿಕೆ ತಡೆಯುವ ಕೆಲಸ, ಮಾರತ್ತಹಳ್ಳಿ ಸೇತುವೆ ಬಳಿ ದೊಡ್ಡ ಪೈಪ್‌ಗಳನ್ನು ಜೋಡಿಸುವ ಕಾಮಗಾರಿಯನ್ನೂ ಜೂನ್ 6 ಮತ್ತು 7 ರಂದು ನಡೆಸಲಾಗಿದೆ. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಶನಿವಾರದಿಂದ ನೀರು ಪೂರೈಕೆ ಸಾಮಾನ್ಯವಾಗಿರಲಿದೆ. ಕಾವೇರಿ 5ನೇ ಹಂತ ಜುಲೈನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ 1, 2, ಮತ್ತು 3ನೇ ಹಂತದ ನೀರು ಸರಬರಾಜು ಘಟಕವನ್ನು 12 ಗಂಟೆ ಕಾವೇರಿ 4ನೇ ಹಂತ, 1ನೇ, 2ನೇ ಘಟ್ಟಗಳ ನೀರು ಸರಬರಾಜು ಘಟಕಗಳನ್ನು 4 ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು.