ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೊದಲೇ ಸಾಕಷ್ಟು ಚರ್ಚೆ ಮಾಡಲಾಗಿದೆ. ಗ್ಯಾರಂಟಿಗಳನ್ನು ನಿಲ್ಲಿಸುವುದು ಸೂಕ್ತವಲ್ಲ ಅಂತ ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ, ಈ ನಿಟ್ಟಿನಲ್ಲಿ ಅಪಸ್ವರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಯಿಂದ ಒಂದಷ್ಟು ಹಣಕಾಸಿನ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಆಗುವಾಗ ಮರುಹೊಂದಾಣಿಕೆ ಮಾಡಬೇಕಾಗುತ್ತದೆ. ಇದನ್ನು ನಾವು ಮಾಡುತ್ತೇವೆ. ಅದು ನಮಗೆ ಗೊತ್ತಿದೆ. ಹಸಿದ ಹೊಟ್ಟೆಯಲ್ಲಿರುವ ಜನರಿಗೆ ಬೇರೆ ಯಾವ ಯೋಜನೆಗಳನ್ನು ಜಾರಿಗೆ ತಂದರೂ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತವಲ್ಲವೆಂದು ಈಗಾಗಲೇ ಸರ್ಕಾರ ನಿರ್ಧಾರ ಮಾಡಿದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಚುನಾವಣೆಗು ಮೊದಲು ಈ ರೀತಿಯ ಬಹಳಷ್ಟು ಪ್ರಶ್ನೆಗಳು ಕೇಳಿ ಬಂದವು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿದರು. ಇದಕ್ಕೆ ಚುನಾವಣೆ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಸೇರಿದಂತೆ ನಾವೆಲ್ಲ ಸ್ಪಷ್ಟಪಡಿಸಿದ್ದೇವೆ.
ನಾವು ಗ್ಯಾರಂಟಿ ಯೋಜನೆಗಳನ್ನು ಕೊಡುವುದಕ್ಕು ಮೊದಲು ಬಹಳಷ್ಟು ಚರ್ಚೆ ಮಾಡಿದ್ದೇವೆ. ನಮ್ಮ ಉದ್ದೇಶ ಇರುವುದು ಬಡತನ ನಿರ್ಮೂಲನೆ. ಈ ಉದ್ದೇಶದಲ್ಲಿ ಹೊಂದಾಣಿಕೆಯಾಗಲು ಆಗುವುದಿಲ್ಲ. ಹಳ್ಳಿಗಳಲ್ಲಿ ಕೃಷಿ ಕೂಲಿ ಕಾರ್ಮಿಕರು ಬಹಳ ತೊಂದರೆಯಲ್ಲಿದ್ದಾರೆ. ನೋಟು ಬದಲಾವಣೆ, ಜಿಎಸ್‌ಟಿ ಜಾರಿಯಾದ ನಂತರ ಬಡತನದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಬಡ ಜನರಿಗೆ ಏನಾದರು ಮಾಡಬೇಕು ಎಂಬ ಉದ್ದೇಶದಿಂದ ಪ್ರಣಾಳಿಕೆಯ ಅಧ್ಯಕ್ಷನಾಗಿ ಚರ್ಚೆ ಮಾಡಿ, ಗ್ಯಾರಂಟಿ ಯೋಜನೆಗಳ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತವಲ್ಲ ಎಂದು ತೀರ್ಮಾನ ಮಾಡಿಕೊಂಡಿದ್ದೇವೆ. ಯಾರು ಏನೆ ಹೇಳಿದರು ಸಹ ಈಗಾಗಲೇ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಖಾಲಿಯಾಗಿರುವ ಸಚಿವ ಸ್ಥಾನದ ಭರ್ತಿಯ ಕುರಿತ ಪ್ರತಿಕ್ರಿಯಿಸಿ, ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡುವ ವಿಚಾರ ಮುಖ್ಯಮಂತ್ರಿಯವರಿಗೆ ಬಿಟ್ಟಿರುವುದು. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ, ಏನ್ ತೀರ್ಮಾನ ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳಲಿ. ಅದರ ಬಗ್ಗೆ ನಾನು ಉತ್ತರಿಸಲು ಆಗುವುದಿಲ್ಲ ಎಂದರು.
ಸಂಪುಟ ಪುನರ್ ರಚನೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಸಭೆ ಇದ್ದೆ ಇರುತ್ತದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣಕ್ಕಾಗಿ ಸಚಿವ ಸಂಪುಟ ಸಭೆ ನಡೆಸಲು ಆಗಿಲ್ಲ. ಅನೇಕ ತೀರ್ಮಾನಗಳನ್ನು ಕೈಗೊಳ್ಳಲು ಆಗಿಲ್ಲ. ಸಭೆಗೂ ಸಚಿವರ ಬದಲಾವಣೆಗೂ ಸಂಬಂಧವಿಲ್ಲ. ಪುರನ್ ರಚನೆ ಹೈಕಮಾಂಡ್‌ನವರ ತೀರ್ಮಾನ. ನಾವ್ಯಾರು ಅದರ ಬಗ್ಗೆ ನಾವು ಮಾತನಾಡಲು ಆಗುವುದಿಲ್ಲ ಎಂದು ಹೇಳಿದರು.