ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದ್ದೇ ರೋಚಕ. ರಾಜಕಾಲುವೆಯಲ್ಲಿ ಶವ ಪತ್ತೆಯಾದ 2-3 ಗಂಟೆಗಳಲ್ಲಿಯೇ ಪೊಲೀಸರು ಮಹತ್ವದ ಸಾಕ್ಷ್ಯವನ್ನು ಸಂಗ್ರಹಿಸಿದ್ದರು. ತಾವೇ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಶರಣಾಗುವ ಮೊದಲೇ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು.
ಸುಮನಹಳ್ಳಿ ಸೇತುವೆ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬೆಳಗಿನ ಜಾವ 3.04ರ ಸುಮಾರಿಗೆ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದ ಚಲನವಲನ ಸೆರೆಯಾಗಿದೆ. ಆದಾದ ಆರು ನಿಮಿಷಗಳ ನಂತರ, ಸ್ಕಾರ್ಪಿಯೋ ಹಿಂಬದಿಯ ಬಾಗಿಲು ತೆರೆದಿರುವಂತೆಯೇ ಅಲ್ಲಿಂದ ಹಿಂತಿರುಗಿರುವುದು ಕಂಡುಬಂದಿದೆ. ನಂತರ ಪೊಲೀಸರು ಸ್ಕಾರ್ಪಿಯೋ ವಾಹನದ ಬೆನ್ನುಹತ್ತಿದ್ದಾರೆ ಮತ್ತು ಹಲವಾರು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ ಅದು ಪಟ್ಟಣಗೆರೆಯಲ್ಲಿರುವ ಶೆಡ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ.
ಹತ್ಯೆಗೆ ಬಳಸಿದ್ದ ಎರಡು ಎಸ್‌ಯುವಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಎರಡೂ SUV ಗಳು ನಟನ ಹೆಸರಿನಲ್ಲಿಲ್ಲ.
ಕೆಂಪು ಬಣ್ಣದ ಎಸ್‌ಯುವಿ ಆರ್‌ಆರ್‌ನಗರದ ಪಬ್‌ನ ಮಾಲೀಕ ವಿನಯ್ ಹೆಸರಿನಲ್ಲಿ ನೋಂದಣಿಯಾಗಿದ್ದು, ಕಪ್ಪು ಬಣ್ಣದ ಸ್ಕಾರ್ಪಿಯೋ ಪ್ರದುಶ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದೆ. ಕೊಲೆ ಮಾಡಲಾಗಿದೆ ಎಂದು ಹೇಳಲಾದ ಶೆಡ್‌ನಿಂದ ಸಂತ್ರಸ್ತನ ಶವವನ್ನು ಸ್ಕಾರ್ಪಿಯೋದಲ್ಲಿ ತಂದು ಸುಮನಹಳ್ಳಿ ಸೇತುವೆ ಬಳಿಯ ಚರಂಡಿಗೆ ಎಸೆಯಲಾಗಿದೆ.
ವಶಪಡಿಸಿಕೊಂಡ ಎಸ್‌ಯುವಿಗಳಲ್ಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಈ ಎರಡು ಎಸ್‌ಯುವಿಗಳ ಚಲನವಲನದ ದೃಶ್ಯಾವಳಿಗಳು ಶೆಡ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಭಾನುವಾರ ಬೆಳಗಿನ ಜಾವ 3.27ರ ಸುಮಾರಿಗೆ ವಾಹನಗಳು ಸಂಚರಿಸುತ್ತಿದ್ದವು.