ಬೆಂಗಳೂರು: ನಟ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜತೆಗೆ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ಸರೆಂಡರ್ ಆಗಿದ್ದು, ಕೂಡಲೇ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಿತ್ರದುರ್ಗದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗು ಎಂದು ಗುರುತಿಸಲಾಗಿದೆ.
ಪೊಲೀಸರ ಎದುರು ಶರಣಾದ ಆರೋಪಿಗಳು
ಇನ್ನು ಚಿತ್ರದುರ್ಗದ ಡಿವೈಎಸ್‌ಪಿ ಪಿ.ಕೆ ದಿನಾಕರ್ ಅವರಿಗೆ ಶರಣಾಗಿದ್ದು, ಅನು ಚಿತ್ರದುರ್ಗದ ಸಿಹಿನೀರ ಹೊಂಡ ನಿವಾಸಿಯಾದರೆ, ಜಗದೀಶ್ ಚಿತ್ತದುರ್ಗದ ರೈಲ್ವೆ ಸ್ಟೇಶನ್ ಏರಿಯಾ ನಿವಾಸಿಯಾಗಿದ್ದಾನೆ. ಸದ್ಯ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದು ಆ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಒಟ್ಟು 16 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ.
ಆರೋಪಿಗಳ ಮೊಬೈಲ್ ಫೋನ್ FSLಗೆ ರವಾನೆ
ಇದೇ ವೇಳೆ ಅನ್ನಪೂರ್ಣೇಶ್ವರಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳಿಂದ ಜಪ್ತಿ ಮಾಡಲಾದ 14 ಮೊಬೈಲ್ ಫೋನ್ ಗಳನ್ನು ಡಾಟಾ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ. ಮೊಬೈಲ್‌ನಲ್ಲಿ ಹಲವಾರು ಮಾಹಿತಿಗಳು ಡಿಲೀಟ್ ಆಗಿರುವ ಅನುಮಾನ ಇದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಡಾಟಾ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ (FSL) ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ.