ಪೋಕ್ಸೋ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ಮಾಜಿ ಸಿಎಂ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಸಹಜವಾಗಿ ಅನಾರೋಗ್ಯದ ಸಮಸ್ಯೆಗಳಿರುತ್ತವೆ. ಅವರು ತನಿಖಾ ತಂಡದ ಎದುರು ಜೂ.17 ರಂದು ಹಾಜರಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರನ್ನು ಬಂಧಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ್ದು ತನಿಖೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಸೂಚಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗು ಚಿತ್ರದುರ್ಗದ ಡಿವೈಎಸ್‌ಪಿ ಪಿ.ಕೆ ದಿನಕರ್ ಎದುರು ಶರಣಾಗಿದ್ದಾರೆ. ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 16 ಮಂದಿ ಆರೋಪಿಗಳು ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಹೇಳದಿರಲು ಕೊಲೆಯಲ್ಲಿ ಶಾಮೀಲಾದವರಿಗೆ ನೀಡಲು ಆರ್.ಆರ್.ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇರಿಸಿದ್ದ ರೂ.30 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ನಾವೇ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿಗೆ ತಲಾ 5 ಲಕ್ಷ ನೀಡಲು ಹಣ ಇಡಲಾಗಿತ್ತು. ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 16 ಮಂದಿ ಆರೋಪಿಗಳು ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ, 'ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾವುದೇ ಕಾರಣಕ್ಕೂ ನೀವು ಜನರನ್ನು ಹೊಡೆಯಲು ಅಥವಾ ಕೊಲ್ಲಲು ಮುಂದಾಗಬೇಡಿ. ನ್ಯಾಯ ಸಿಗುವ ಬಗ್ಗೆ ನಿಮಗೆ ಗೊಂದಲವಿದ್ದರೂ ಒಂದು ದೂರು ನೀಡಿದರೆ ಸಾಕು ಎಂದು ಹೇಳಿದ್ದು ಪೊಲೀಸ್ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ವಿರುದ್ಧ ವಂಚನೆ, ಜೀವ ಬೆದರಿಕೆ ಹಾಕಿದ ಆರೋಪದಡಿ FIR ದಾಖಲಾಗಿದೆ. ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ವ್ಯವಹಾರದಲ್ಲಿ ಸಂಜಯನಗರದ ನಿವಾಸಿಗಳಾಗಿರುವ ದಂಪತಿಗೆ ವಂಚನೆ ಮಾಡಿರುವ ಆರೋಪ ಅರುಣ್ ಸೋಮಣ್ಣ ವಿರುದ್ಧ ಕೇಳಿಬಂದಿದೆ. 2019ರಲ್ಲಿ ಅರುಣ್ ಮತ್ತು ಮಧ್ವರಾಜ್ ಜಂಟಿಯಾಗಿ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯನ್ನು ಆರಂಭಿಸಿದ್ದರು. ಸಂಸ್ಥೆಯ 'ಲಾಭದ ಪಾಲನ್ನು ಕೇಳಿದಾಗ ಅರುಣ್ ಜೀವ ಬೆದರಿಕೆ ಹಾಕಿದ್ದಾರೆ, ಲಾಭದ ಪ್ರಮಾಣವನ್ನು ಶೇ.30ರಿಂದ ಶೇ.10 ಕ್ಕೆ ಇಳಿಸಿ ವಂಚನೆ ಮಾಡಿದ್ದಾರೆ ಎಂದು ಮಧ್ವರಾಜ್ ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಗೆ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಇ ತುಕಾರಾಂ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತುಕಾರಾಂ ಸಂಡೂರು ಕ್ಷೇತ್ರದ ಶಾಸಕರಾಗಿದ್ದರು. ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ತುಕಾರಾಂ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು.
ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಕ್ಕೆ ಹೆಚ್ ಡಿ ಕುಮಾರಸ್ವಾಮಿ ಇಂದು ಆಗಮಿಸಿದರು. ಹೆಚ್ ಡಿ ಕುಮಾರಸ್ವಾಮಿ ಅವರನ್ನು ವಿಮಾನ ನಿಲ್ದಾಣದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸ್ವಾಗತಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಕೃಷಿ ಸಚಿವನಾಗಿ ಕೆಲಸ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದೆ ನರೇಂದ್ರ ಮೋದಿ ಅವರು ನನಗೆ ಎರಡು ದೊಡ್ಡ ಖಾತೆ ಕೊಟ್ಟಿದ್ದಾರೆ. ನಾಡಿನ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇನೆ. ಎಲ್ಲಾ ಇಲಾಖೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡುತ್ತೇನೆ. ರೈತರ ಕೃಷಿಗೆ ತೊಂದರೆ ಕೊಡದಂತೆ ಕಾರ್ಖಾನೆ ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.