ಅರುಣ್ ಸೋಮಣ್ಣ 
ರಾಜ್ಯ

ಕೇಂದ್ರ ಸಚಿವ ವಿ ಸೋಮಣ್ಣ ಪುತ್ರ ವಿರುದ್ಧ FIR: ವಂಚನೆ, ಜೀವ ಬೆದರಿಕೆ ಆರೋಪದಡಿ ಅರುಣ್ ಸೋಮಣ್ಣಗೆ ಬಂಧನ ಭೀತಿ!

ಇತ್ತೀಚೆಗಷ್ಟೇ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಸಚಿವರಾದ ವಿ ಸೋಮಣ್ಣಗೆ ಆಘಾತ ಎದುರಾಗಿದ್ದು, ವಂಚನೆ, ಜೀವಬೆದರಿಕೆ ಆರೋಪದಡಿ ಅವರ ಪುತ್ರ ಅರುಣ್ ಸೋಮಣ್ಣ ಸೇರಿ ಮೂವರ ವಿರುದ್ಧ FIR ದಾಖಲಾಗಿದೆ.

ಬೆಂಗಳೂರು: ಇತ್ತೀಚೆಗಷ್ಟೇ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಸಚಿವರಾದ ವಿ ಸೋಮಣ್ಣಗೆ ಆಘಾತ ಎದುರಾಗಿದ್ದು, ವಂಚನೆ, ಜೀವಬೆದರಿಕೆ ಆರೋಪದಡಿ ಅವರ ಪುತ್ರ ಅರುಣ್ ಸೋಮಣ್ಣ ಸೇರಿ ಮೂವರ ವಿರುದ್ಧ FIR ದಾಖಲಾಗಿದೆ.

ಹೌದು.. ಕೇಂದ್ರ ರೈಲ್ವೇ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್‌ ಸೋಮಣ್ಣ ವಿರುದ್ಧ ವಂಚನೆ, ಜೀವ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರಿನ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ. ದೂರುದಾರರು ನ್ಯಾಯಾಲಯದ ಮೊರೆ ಹೋಗಿ ಆದೇಶ ತಂದು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಈವೆಂಟ್‌ ಮ್ಯಾನೇಜ್‌ ಮೆಂಟ್‌ ಕಂಪನಿ ವ್ಯವಹಾರದಲ್ಲಿ ಸಂಜಯನಗರದ ನಿವಾಸಿಗಳಾಗಿರುವ ದಂಪತಿಗೆ ಅರುಣ್‌ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಇದಾಗಿದೆ. ಸಂಜಯನಗರದ ಎಇಸಿಎಸ್‌ ಲೇಔಟ್‌ ನಿವಾಸಿ ತೃಪ್ತಿ ಹೆಗಡೆ ಮತ್ತು ಮಧ್ವರಾಜ್‌ ದಂಪತಿ ಈ ದೂರು ಸಲ್ಲಿಸಿದ್ದಾರೆ. ತೃಪ್ತಿ ಹೆಗಡೆ ದಂಪತಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ 37ನೇ ಚೀಫ್‌ ಮೆಟ್ರೋಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ದೂರು ದಾಖಲಿಸಿಕೊಳ್ಳಲು ಆದೇಶಿಸಿತ್ತು. ಕೋರ್ಟ್‌ ಆದೇಶದಂತೆ ಪೊಲೀಸರು ಅರುಣ್‌ ಸೋಮಣ್ಣ, ಪ್ರಮೋದ್‌ ರಾವ್‌ ಮತ್ತು ಜೀವನ್‌ ಎಂಬುವರ ವಿರುದ್ಧ ಎಫ್ ಐ ಆರ್‌ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?

ದೂರು ಸಲ್ಲಿಸಿರುವ ತೃಪ್ತಿ ಹೆಗಡೆ ಮತ್ತು ಮಧ್ವರಾಜ್‌ ದಂಪತಿ ಈವೆಂಟ್‌ ಮ್ಯಾನೇಜ್‌ ಮೆಂಟ್‌ ಕಂಪನಿ ನಡೆಸುತ್ತಿದ್ದಾರೆ. ಇವರು ಸುಮಾರು ಎರಡು ದಶಕಗಳಿಂದ ಮಾರ್ಕೆಟಿಂಗ್‌ ಮತ್ತು ಈವೆಂಟ್‌ ಮ್ಯಾನೇಜ್‌ ಮೆಂಟ್‌ ಮತ್ತು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2013ರಲ್ಲಿ ಮಧ್ವರಾಜ್‌ ಅವರು ಸರ್ಕಾರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಇವರಿಗೆ ಅರುಣ್‌ ಅವರ ಪರಿಚಯವಾಗಿತ್ತು. ಅಂದಿನಿಂದ ಇಬ್ಬರ ಬಾಂಧವ್ಯ ಮುಂದುವರದಿತ್ತು. 2017ರಲ್ಲಿ ಅರುಣ್‌ ಅವರ ಪುತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮಧ್ವರಾಜ್‌ ಅವರೇ ಆಯೋಜಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದರು. ಇದರಿಂದ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು.

ಜಂಟಿ ಉದ್ಯಮ ಶುರುಮಾಡಿದ್ದ ಅರುಣ್ ಸೋಮಣ್ಣ

ನಂತರ 2019ರಲ್ಲಿ ಅರುಣ್‌ ಮತ್ತು ಮಧ್ವರಾಜ್‌ ಜಂಟಿಯಾಗಿ ಈವೆಂಟ್‌ ಮ್ಯಾನೇಜ್‌ ಮೆಂಟ್‌ ಕಂಪನಿಯನ್ನು ಹುಟ್ಟು ಹಾಕುತ್ತಾರೆ. ಆದರೆ ಮಧ್ವರಾಜ್‌ ಯಾವುದೇ ಬಂಡವಾಳ ಹೂಡಿಕೆ ಮಾಡಿರಲಿಲ್ಲ. ಈ ಕಂಪನಿಗೆ ಬೇಕಾದ ಸಂಪೂರ್ಣ ಬಂಡವಾಳವನ್ನು ಅರುಣ್ ಅವರೇ ನೋಡಿಕೊಂಡಿದ್ದರು. ಆರಂಭದಲ್ಲಿ ಈ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಕಂಪನಿಯ ವ್ಯವಹಾರ ಲಾಭನಷ್ಟ ಕುರಿತು ಮಧ್ವರಾಜ್‌ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ.

ಮಧ್ವರಾಜ್‌ ಕೇಳಿದಾಗಲೂ ಅರುಣ್‌ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಅಲ್ಲಿಂದ ಇಬ್ಬರ ಸಂಬಂಧ ಹಳಸುತ್ತಾ ಬಂದಿತ್ತು. ಕೆಲವು ತಿಂಗಳ ಬಳಿಕ ಅರುಣ್‌ ಕಂಪನಿಗೆ ರಾಜೀನಾಮೆ ನೀಡುವಂತೆ ಮದ್ವರಾಜ್‌ ಅವರಿಗೆ ತಾಕೀತು ಮಾಡುತ್ತಾರೆ. ಆದರೆ ಮಧ್ವರಾಜ್‌ ರಾಜೀನಾಮೆ ನೀಡುವುದಿಲ್ಲ. ಇದರಿಂದ ಕೆರಳಿದ ಅರುಣ್‌ ಮಧ್ವರಾಜ್‌ ಗೆ ಕಿರುಕುಳ ನೀಡಲು ಆರಂಭಿಸಿದ್ದರು. ಕಂಪನಿಗೆ ಹೊಸ ಪಾಲುದಾರರನ್ನು ನೇಮಕ ಮಾಡಿಕೊಂಡಿದ್ದರು.

ಲಾಭದ ಪಾಲು ಕೇಳಿದ್ದಕ್ಕೇ ಜೀವ ಬೆದರಿಕೆ?

ಈ ಬಗ್ಗೆ ದೂರಿನಲ್ಲಿ ಆರೋಪಿಸಿರುವ ಮಧ್ವರಾಜ್‌, 'ಲಾಭದ ಪಾಲನ್ನು ಕೇಳಿದಾಗ ಅರುಣ್‌ ಜೀವ ಬೆದರಿಕೆ ಒಡ್ಡುತ್ತಾರೆ. ಲಾಭದ ಪ್ರಮಾಣವನ್ನು ಶೇ.30ರಿಂದ ಶೇ.10ಕ್ಕೆ ಇಳಿಸುತ್ತಾರೆ. ಕಂಪನಿಯ ಕಚೇರಿ ವಿಳಾಸವನ್ನು ಬದಲಾಯಿಸುತ್ತಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡುತ್ತಾರೆ. ಕೊನೆಗೆ ಗೂಂಡಾಗಳನ್ನು ಬಿಟ್ಟು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಂತೆಯೇ ತನ್ನ ಕುಟುಂಬಸ್ಥರ ಮೇಲೆ ಅರುಣ್ ಸೋಮಣ್ಣ ಅವರ ಗೂಂಡಾಗಳು ಹಲ್ಲೆ ಮಾಡಿದ್ದು, ಪತಿಯನ್ನು ಕತ್ತಲೆಯ ಕೋಣೆಯಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂಜಯನಗರ ಪೊಲೀಸರು ಅರುಣ್‌ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ,ಅಪಹರಣ ಮತ್ತಿತರ ಆರೋಪಗಳನ್ನು ಹೊರಿಸಿ ಎಫ್‌ ಐಆರ್‌ ದಾಖಲು ಮಾಡಿದ್ದಾರೆ. ಈ ಪ್ರಕರಣಗಳು ಜಾಮೀನು ರಹಿತ ಪ್ರಕರಣಗಳಾಗಿದ್ದು, ಅರುಣ್‌ ಮತ್ತು ಅವರ ಮತ್ತಿಬ್ಬರು ಸಂಗಡಿಗರು ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.

ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 34 (ಸಾಮಾನ್ಯ ಉದ್ದೇಶ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 387 (ಮರಣ ಭಯದಲ್ಲಿ ವ್ಯಕ್ತಿಯನ್ನು ಹಾಕುವುದು ಅಥವಾ ಹಾಕಲು ಪ್ರಯತ್ನಿಸುವುದು ಅಥವಾ ಸುಲಿಗೆ ಮಾಡುವ ಸಲುವಾಗಿ ಘೋರವಾದ ಗಾಯ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು), 477 ಎ (ಖಾತೆಗಳ ಸುಳ್ಳು) ಮತ್ತು ಇತರ ಸಂಬಂಧಿತ ವಿಭಾಗಗಳಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT