ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟ ದರ್ಶನ್ ಗೆಳತಿ ಪವಿತ್ರಾಗೌಡರ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 16 ಮಂದಿ ಬಂಧನವಾಗಿದ್ದು, ಈ ಮಧ್ಯೆ ಕೊಲೆ ಕೇಸ್ ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೈಸೂರು ರಸ್ತೆಯಲ್ಲಿ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ನಡೆದ ದಿನ ಅಂದರೆ ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ದೇವರಾಜ್‌ನನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪವಿತ್ರಾಗೌಡ ಮನೆಯಲ್ಲಿ ಪೊಲೀಸರಿಂದ ಮಹಜರು
ಅಂತೆಯೇ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ನಡೆಸಿದ್ದು, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾಗೌಡ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ರೇಣುಕಾ ಸ್ವಾಮಿ ಮೇಲೆ ಮೊದಲು ಹಲ್ಲೆ ನಡೆಸಿದ್ದೇ ಪವಿತ್ರಾ ಗೌಡ ಎನ್ನಲಾಗಿದೆ.
ಪವಿತ್ರಾಗೌಡ ನೋಡುತ್ತಿದ್ದಂತೆ ರೇಣುಕಾಸ್ವಾಮಿ ಪವಿತ್ರಾ ಕಾಲಿಗೆ ಬಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳಿದ್ದನಂತೆ. ಸದ್ಯ ಪವಿತ್ರಾ ಮನೆಯಲ್ಲಿ ಪೊಲೀಸರು ಆ ದಿನ ಪವಿತ್ರಾ ಧರಿಸಿದ್ದ ಬಟ್ಟೆ ಹಾಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ಚಪ್ಪಲಿಯನ್ನ ಸೀಜ್ ಮಾಡಲಿದ್ದಾರೆ. ಪ್ರಕರಣದಲ್ಲಿ ಪವಿತ್ರಾ ಚಪ್ಪಲಿ ಕೂಡ ಮಹತ್ವದ ಸಾಕ್ಷ್ಯವಾಗಲಿದೆ ಎನ್ನಲಾಗಿದೆ.