ಕೊಪ್ಪಳ: ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಸುಮಾರು ಆರು ವರ್ಷಗಳ ನಂತರ ಜಾಗತಿಕ ಲಿಂಗಾಯತ ಮಹಾಸಭಾ ಮತ್ತೊಮ್ಮೆ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿ ಒತ್ತಾಯಿಸಲು ನಿರ್ಧರಿಸಿದೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌ಎಂ ಜಾಮದಾರ್ ಭಾನುವಾರ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾಮದಾರ್, ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನದ ಅಗತ್ಯದ ಕುರಿತು ರಾಜ್ಯ ಸರ್ಕಾರ ಮತ್ತು ಕೇಂದ್ರಕ್ಕೆ ಮನವರಿಕೆ ಮಾಡಲು ಮಹಾಸಭಾ ಸರ್ವ ಪ್ರಯತ್ನ ನಡೆಸಲಿದೆ. ಈ ಬಗ್ಗೆ ಒಂದು ತಿಂಗಳಲ್ಲಿ ಜ್ಞಾಪಕ ಪತ್ರ ಸಲ್ಲಿಸಲಾಗುವುದು' ಎಂದರು.
'ದಲಿತರು ಮತ್ತು ಬುಡಕಟ್ಟುಗಳ ಒಂದು ವಿಭಾಗವು ಲಿಂಗಾಯತ ಸಮುದಾಯದ ಅಡಿಯಲ್ಲಿ ಬರುತ್ತದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದರೆ, ಎಸ್‌ಸಿ/ಎಸ್‌ಟಿಗಳಿಗೆ ನೀಡಲಾಗುವ ಪ್ರಯೋಜನಗಳನ್ನು ಅವರು ಕಳೆದುಕೊಳ್ಳುತ್ತಾರೆ ಎಂದು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರವು ತಿರಸ್ಕರಿಸಿದೆ. ಈಗ ಅನೇಕ ದಲಿತರು ಬೌದ್ಧ ಧರ್ಮಕ್ಕೆ ಸೇರಿದ್ದಾರೆ. ಆದರೆ, ಅವರಿನ್ನೂ ಎಸ್‌ಸಿ/ಎಸ್‌ಟಿಗಳಿಗೆ ನೀಡಲಾಗುವ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕೆ ಕೇಂದ್ರ ನೀಡಿರುವ ಕಾರಣ ತಪ್ಪು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಅಭಿಪ್ರಾಯಪಟ್ಟಿದ್ದಾರೆ.
'ಎಲ್ಲ ವೀರಶೈವರು ಲಿಂಗಾಯತರು. ಆದರೆ, ಎಲ್ಲ ಲಿಂಗಾಯತರು ವೀರಶೈವರಲ್ಲ. ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದು ಸುಮಾರು ಐದಾರು ವರ್ಷಗಳ ಹಿಂದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿನ ನಮ್ಮ ಹೋರಾಟವು ಈ ಸಮಸ್ಯೆಗೆ ತಾರ್ಕಿಕ ತೀರ್ಮಾನ ಸಿಗುವವರೆಗೂ ಮುಂದುವರಿಯುತ್ತದೆ. ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಸುವ ಮೂಲಕ ಮಹಾಸಭಾವನ್ನು ಪುನರ್ ಸಂಘಟಿಸಿ ಬಲಪಡಿಸುತ್ತೇವೆ' ಎಂದು ಜಾಮದಾರ್ ಹೇಳಿದರು.