ಬೆಂಗಳೂರು: ಕೋಲಾರ ಜಿಲ್ಲೆಯ ಕೆಜಿಎಫ್ ಪ್ರದೇಶದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ ಮುಗಿದು ನಿಷ್ಕ್ರಿಯವಾಗಿದ್ದ 13 ಟೇಲಿಂಗ್ ಡಂಪ್‌ಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ಸೇರಿದಂತೆ ಒಟ್ಟು 20 ವಿಷಯಗಳ ಮೇಲೆ ಚರ್ಚೆ ಮಾಡಿ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು, "ಎಂಎಂಡಿಆರ್ ಕಾಯ್ದೆಯ ಪ್ರಕಾರ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರೆಸಲು ರಾಜ್ಯ ಸರ್ಕಾರದ ವಿಶೇಷ ಅನುಮತಿ ಅಗತ್ಯವಿರುವುದರಿಂದ, ಕ್ಯಾಬಿನೆಟ್ ಅನುಮೋದನೆ ನೀಡಿದೆ" ಎಂದು ಹೇಳಿದರು.
ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿರುವ ನಿಷ್ಕ್ರಿಯ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್(ಬಿಜಿಎಂಎಲ್) ಗಣಿಗಾರಿಕೆ ಪ್ರದೇಶದಲ್ಲಿ 1,003.4 ಎಕರೆ ವಿಸ್ತೀರ್ಣದ 13 ಟೈಲಿಂಗ್ ಡಂಪ್ಸ್ ಪ್ರದೇಶದಲ್ಲಿ ಎಂಎಂಡಿಆರ್ (ಗಣಿ ಮತ್ತು ಖನಿಜಗಳ ಅಡಿಯಲ್ಲಿ) ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.
ಈ ಟೈಲಿಂಗ್ ಡಂಪ್‌ಗಳನ್ನು ಬಳಸಿಕೊಂಡು ಗಣಿಗಾರಿಕೆ ಚಟುವಟಿಕೆಗಳನ್ನು ಪ್ರಾರಂಭಿಸಿದರೆ, ಸ್ವಾಭಾವಿಕವಾಗಿ ಅದು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪಿಸಲು ರಾಜ್ಯ ಸರ್ಕಾರ ಈಗಾಗಲೇ ಈ ಪ್ರದೇಶದಲ್ಲಿ 2,330 ಎಕರೆ ಭೂಮಿಯನ್ನು ಕೇಂದ್ರಕ್ಕೆ ಕೇಳಿದೆ.
2022-23ರವರೆಗೆ BGML, ಕರ್ನಾಟಕಕ್ಕೆ 75,24,88,025 ರೂ.ಗಳನ್ನು ಬಾಕಿ ಪಾವತಿಸಬೇಕಾಗಿದೆ. ನಾವು ಬಾಕಿ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇಲ್ಲದಿದ್ದರೆ ನಾವು ಭೂಮಿ ಕೊಡಿ ಎಂದು ಕೇಳಿದ್ದೇವೆ ಎಂದರು.
ಇದೇ ವೇಳೆ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಸುವ ದಿನಾಂಕಗಳನ್ನು ನಿರ್ಧರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಅಧಿಕಾರ ನೀಡಿದೆ. "ಇದು ಎರಡು ವಾರಗಳವರೆಗೆ ಇರುತ್ತದೆ" ಎಂದು ಸಚಿವರು ಹೇಳಿದರು.
ಸಂವಿಧಾನ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಸಂವಿಧಾನ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ ಹಾಕುವುದು ವಾಡಿಕೆ. ಇನ್ನು ಮುಂದೆ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ಎಚ್ ಕೆ ಪಾಟೀಲ್ ಹೇಳಿದರು.
ಇನ್ನು ಮೈಸೂರಿನ ಕೆಆರ್ ಆಸ್ಪತ್ರೆ ಆವರಣದಲ್ಲಿ 75 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹೊಸ ಹೊರರೋಗಿಗಳ ಬ್ಲಾಕ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎಲ್ಲಾ 46,829 ಸರ್ಕಾರಿ ಶಾಲೆಗಳು ಮತ್ತು 1,234 ಪಿಯು ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಒದಗಿಸಲು ಅಂದಾಜು 29.19 ಕೋಟಿ ರೂ., ರೋಟರಿ ಇಂಟರ್‌ನ್ಯಾಶನಲ್-ಬೆಂಗಳೂರು ಸಹಯೋಗದಲ್ಲಿ ಸಮಾಜ ಕಲ್ಯಾಣ ಅಭಿವೃದ್ಧಿ ಇಲಾಖೆಯ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಅನುಷ್ಠಾನಕ್ಕೆ 2.37 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ವಿಶ್ವವಿದ್ಯಾಲಯಗಳ ಅಭಿವೃದ್ದಿಗೆ 297.77 ಕೋಟಿ ರೂ. ಬಿಡುಗಡೆಗೆ ಮತ್ತು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬೆಳಗಾವಿ ಬಳಿಯಲ್ಲಿ ಬಡಾವಣೆ ನಿರ್ಮಾಣಕ್ಕೆ 137 ಕೋಟಿ ರೂ. ಅಂದಾಜು ವೆಚ್ಚಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.