ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಚಾಲೆಂಜಿಂಗ್ ನಟ ದರ್ಶನ್ ಕೃತ್ಯವನ್ನು ಕಾಂಗ್ರೆಸ್ ಶಾಸಕ ಸಮರ್ಥಿಸಿಕೊಂಡಿದ್ದಾರೆ.
ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಗೌಡ ಅವರು, ನಟ ದರ್ಶನ್ ಸ್ವಲ್ಪ ಮುಂಗೋಪ, ಸಿಟ್ಟು ಜಾಸ್ತಿ. ಆದರೆ ಕೊಲೆ ಮಾಡುವಷ್ಟು ಕ್ರೂರಿಯಲ್ಲ ಎಂದು ಹೇಳಿದ್ದಾರೆ. ದರ್ಶನ್ ನನಗೆ ಹಲವು ವರ್ಷಗಳಿಂದ ಸ್ನೇಹಿತ. ಆದರೆ ಈ ರೀತಿ ದರ್ಶನ್ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆಯನ್ನು ದರ್ಶನ್ ಜೊತೆಗಿರುವವರು ಮಾಡಿದ್ರಾ? ಆ ಕೊಲೆಯನ್ನು ಇವರ ಮೇಲೆ ಏನಾದ್ರೂ ಹಾಕಿದ್ರಾ ಗೊತ್ತಿಲ್ಲ?. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ ಹೇಳೋಕೆ ಆಗಲ್ಲ ಎಂದು ಉದಯ್ ಗೌಡ ಹೇಳಿದ್ದಾರೆ.
ನಿನ್ನೆ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಎಲ್ಲಾ 17 ಆರೋಪಿಗಳನ್ನು ಹಾಜರುಪಡಿಸಲಾಗಿದ್ದು ದರ್ಶನ್ ಹಾಗೂ ಇತರ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಇತರ 13 ಆರೋಪಿಗಳನ್ನು ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.