ಬೆಂಗಳೂರು: ವಾಹನ ಸವಾರರು ರಸ್ತೆ ಸುರಕ್ಷತೆ ಕಡ್ಡಾಯವಾಗಿ ಪಾಲಿಸಬೇಕೆಂದು ಸಂದೇಶ ಸಾರುವ ಮತ್ತು ಹೆಲ್ಮೆಟ್ ನ್ನು ಕಡ್ಡಾಯವಾಗಿ ಧರಿಸಬೇಕೆಂದು ಉತ್ತೇಜಿಸಲು ಹೀರೋ ಮೋಟೊಕಾರ್ಪ್ ಸಹಯೋಗದಲ್ಲಿ(TNIE and Hero MotoCorp) ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನ ಬೆಂಗಳೂರು ಕಚೇರಿ ಆಯೋಜಿಸಿರುವ ಟಿಎನ್‌ಐಇ-ಹೀರೊ ಮೋಟೊಕಾರ್ಪ್ ಎರಡು ದಿನಗಳ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.
ಗೃಹ ಸಚಿವ ಡಾ ಜಿ ಪರಮೇಶ್ವರ್, ಸಾರಿಗೆ ಇಲಾಖೆ ಸಚಿವ ರಾಮಂಲಿಂಗಾ ರೆಡ್ಡಿ ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ್ ಮತ್ತು ನಿಮ್ಹಾನ್ಸ್ ಸಂಸ್ಥೆ ನಿರ್ದೇಶಕಿ ಪ್ರತಿಮಾ ಮೂರ್ತಿಯವರು ಭಾಗವಹಿಸಿ ರಾಜ್ಯದಲ್ಲಿ ಸಂಭವಿಸುವ ರಸ್ತೆ ಅಪಘಾತಗಳು, ವಾಹನ ಸವಾರರು ಎಚ್ಚರಿಕೆ ವಹಿಸುವ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು. ರಾಜ್ಯದ ವಾಹನ ಚಾಲಕರು ಮತ್ತು ಸಂಚಾರ ಪೊಲೀಸರಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸಿದರು.
TNIE, Hero MotoCorp ಜಂಟಿಯಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ 500ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಮಾರ್ಷಲ್ ಗಳು,ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿ ವಿಧಾನ ಸೌಧದವರೆಗೆ ಜಾಥಾ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಡಾ ಪರಮೇಶ್ವರ್, ವಾಹನ ಸವಾರರಿಗೆ ಪರವಾನಗಿ(License) ನೀಡುವ ಪ್ರಕ್ರಿಯೆಯನ್ನು ಕಠಿಣಗೊಳಿಸಬೇಕು. ವಿದೇಶಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗಬೇಕೆಂದರೆ ಕಠಿಣ ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ತೇರ್ಗಡೆ ಹೊಂದಿದರೆ ಮಾತ್ರ ಲೈಸೆನ್ಸ್ ಸಿಗುತ್ತದೆ. ನಮ್ಮಲ್ಲಿಯೂ ಆ ನಿಯಮ ಕಠಿಣವಾಗಿ ಜಾರಿಯಾಗಬೇಕೆಂದರು.
ತಾವು ಹಲವು ವರ್ಷಗಳ ಚಾಲನಾ ಅನುಭವ ಹೊಂದಿದ್ದರೂ ರಿವರ್ಸ್ ಪ್ಯಾರಲಲ್ ಪಾರ್ಕಿಂಗ್ ಮಾಡಬೇಕಾದಾಗ ಅಡಿಲೇಡ್‌ನಲ್ಲಿ ಪರವಾನಗಿ ಪರೀಕ್ಷೆಯನ್ನು ತೇರ್ಗಡೆ ಹೊಂದಲು ತಾನು ವಿಫಲನಾದೆ. ನಂತರ ಒಂದು ವಾರ ತರಬೇತಿ ಪಡೆದುಕೊಂಡು ನಂತರ ಮತ್ತೆ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾದೆ ಎಂದು ನೆನಪಿಸಿಕೊಂಡರು.