ಯಾದಗಿರಿ: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 5 ರಂದು ಶಹಾಪುರ ಪಟ್ಟಣದ ಮೋಟಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಅರಣ್ಯ ಅಧಿಕಾರಿ ಮಹೇಶ್ ಕನಕಟ್ಟಿ ಅವರನ್ನು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಐವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ರಾಜು, ರೇಖು ನಾಯಕ್, ತಾರಾ ಸಿಂಗ್, ನರಸಿಂಗ್ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ.
ಈ ಐವರ ಗ್ಯಾಂಗ್ ಬಾರ್ & ರೆಸ್ಟೋರೆಂಟ್‌ನಲ್ಲಿ ಕುಡಿದು ಕೂಗಾಡಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಮಹೇಶ್ ಕಣಕಟ್ಟಿ ಮೇಲೆ ಏಕಾಏಕಿ ಕಟ್ಟಿಗೆಯಿಂದ ದಾಳಿ ಮಾಡಿದ್ದಾರೆ. ಬಡಿಗೆಯಿಂದ ಬಡಿದು, ಕಾಲಿನಿಂದ ಒದ್ದು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಮರುದಿನ ರೆಸ್ಟೋರೆಂಟ್ ಬಳಿ ಬಿಸಾಡಿದ್ದ ಮಹೇಶ್ ಅವರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ನಡುವೆ ಮೃತ ಮಹೇಶ್ ಪತ್ನಿ ಕೊಲೆ ಆರೋಪ ಮಾಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ರೆಸ್ಟೋರೆಂಟ್‌ನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ.
ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ.