ಬೆಂಗಳೂರು: ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ತಮಗೆ ಇದುವರೆಗೆ ಅಧಿಕೃತವಾಗಿ ದೂರು ಬಂದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಸೂರಜ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟ ಹಾಸನದಲ್ಲಾಗಲಿ, ಬೆಂಗಳೂರಿನಲ್ಲಾಗಲಿ ಇನ್ನೂ ದೂರು ದಾಖಲಾಗಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು.
ನಮಗೆ ಯಾರೂ ಅಧಿಕೃತ ದೂರು ನೀಡಿಲ್ಲ. ದೂರು ಬಂದ ಕೂಡಲೇ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ನನಗೆ ಯಾವುದೇ ಪತ್ರ ಬಂದಿಲ್ಲ. ಪ್ರಕರಣ ಏನು ಎಂಬುದಾಗಿ ತಿಳಿದುಕೊಂಡು ನಾವು ತನಿಖೆ ಮಾಡುತ್ತೇವೆ. ತನಿಖೆಯನ್ನು ಸಿಐಡಿಗೆ ಕೊಡುವ ಮುನ್ನ ನೈಜತೆ ತಿಳಿದುಕೊಳ್ಳುತ್ತೇವೆ. ಅಧಿಕೃತ ದೂರು ಬಂದಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುತ್ತೇವೆ ಎಂದರು.
ಸೂರಜ್ ರೇವಣ್ಣ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ ಮತ್ತು ಸೆಕ್ಸ್ ವಿಡಿಯೋ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಅವರ ಸಹೋದರ.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾರೇ ಆಗಿರಲಿ, ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಪ್ರಜ್ವಲ್ ರೇವಣ್ಣ ಆಗಲಿ, ಸೂರಜ್ ರೇವಣ್ಣ ಆಗಲಿ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
ಸೂರಜ್ ರೇವಣ್ಣ ಅವರ ಚಿಕ್ಕಪ್ಪ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸೂರಜ್ ರೇವಣ್ಣ ವಿರುದ್ಧದ ಆರೋಪದ ಬಗ್ಗೆ ನನ್ನೊಂದಿಗೆ ಮಾತನಾಡಬೇಡಿ ಎಂದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ವಿಷಯದ ಬಗ್ಗೆ ನನ್ನಲ್ಲಿ ಕೇಳಬೇಡಿ ಎಂದು ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದರು.
ನೀವು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತೀರಿ. ಈ ವಿಚಾರದಲ್ಲಿ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ, ಕಾನೂನು ಅದನ್ನು ನೋಡಿಕೊಳ್ಳುತ್ತದೆ. ಈ ದೂರುಗಳು ಏಕೆ ದಾಖಲಾಗಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.
ಜೆಡಿಎಸ್‌ನ ಹಿರಿಯ ಮುಖಂಡ ಬಂಡೆಪ್ಪ ಕಾಶೆಂಪೂರ್, ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷ ಕ್ರಮ ಕೈಗೊಂಡಿತ್ತು. ಲೋಕಸಭೆ ಚುನಾವಣೆಗೂ ಮುನ್ನ ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹರಿದಾಡಿದ್ದವು. ಈಗ ಸೂರಜ್ ರೇವಣ್ಣ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಕಾನೂನು ಇದ್ದು, ಘಟನೆಯಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪ್ರಕರಣದಲ್ಲಿ ಮಾಧ್ಯಮ ವರದಿಗಳನ್ನು ಆಧರಿಸಿ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಜೆಡಿಎಸ್ ಕಾರ್ಯಕರ್ತ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಯ ನಂತರ ಸೂರಜ್ ರೇವಣ್ಣ ಅವರ ಸಹಾಯಕ ಶಿವಕುಮಾರ್ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಣ ವಸೂಲಿ ಮಾಡಲು ಸೂರಜ್ ರೇವಣ್ಣ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.